ಕಾಂಗ್ರೆಸ್‍ಗೆ ಮತ ಕೊಟ್ಟರೆ ಅದು ವ್ಯರ್ಥ: ಡಾ.ಅಶ್ವತ್ಥನಾರಾಯಣ್


22-04-2024
Press Release

Download Document

22-4-2024

 

ಪ್ರಕಟಣೆಯ ಕೃಪೆಗಾಗಿ

 

ಕಾಂಗ್ರೆಸ್‍ಗೆ ಮತ ಕೊಟ್ಟರೆ ಅದು ವ್ಯರ್ಥ: ಡಾ.ಅಶ್ವತ್ಥನಾರಾಯಣ್

ಬೆಂಗಳೂರು: ದೃಢವಾದ ನಿಲುವಿಲ್ಲದ, ಜನರಲ್ಲಿ ಗೊಂದಲ ಉಂಟು ಮಾಡುವ, ಭಯೋತ್ಪಾದಕರನ್ನು ಬೆಂಬಲಿಸುವ ಕಾಂಗ್ರೆಸ್‍ಗೆ ಮತ ಕೊಟ್ಟರೆ ಅದು ವ್ಯರ್ಥ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಹೋಟೆಲ್ ಜಿ.ಎಂ. ರಿಜಾಯ್ಸ್‍ನ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಹತ್ಯೆಯಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ಸುರಕ್ಷಿತತೆ ಕುರಿತು ಮಾತನಾಡಿಲ್ಲ. ಕಾಂಗ್ರೆಸ್ಸಿಗರು ತಮ್ಮ ಪಕ್ಷದ ಕಾರ್ಪೊರೇಟರ್ ಮಗಳ ಕುರಿತು ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.

ಕೊಲೆಗಾರನ ರಕ್ಷಣೆ ಮಾಡುವ ಪ್ರಯತ್ನ ನಡೆದಿದೆ. ನನ್ನ ಮಗಳ ಮೇಲೆ ಮಸಿ ಬಳಿಯುವ ಯತ್ನ ನಡೆದಿದೆ ಎಂದು ಸ್ವತಃ ನೇಹಾ ಅವರ ತಂದೆ ಹೇಳಿದ್ದಾರೆ. ಸಿಬಿಐ ತನಿಖೆಗೆ ಒಪ್ಪಿಸಲು ಕೋರಿದ್ದಾರೆ ಎಂದು ವಿವರಿಸಿದರು. ಕೆಜಿಹಳ್ಳಿ- ಡಿಜೆ ಹಳ್ಳಿ ಗಲಭೆಯಲ್ಲಿ ಸ್ವತಃ ಅವರ ಶಾಸಕರ ಮನೆಗೇ ಬೆಂಕಿ ಹಾಕಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಆ ಶಾಸಕರ ಪರ ನಿಂತಿಲ್ಲ ಎಂದು ಆಕ್ಷೇಪಿಸಿದರು.

ಅಲ್ಪಸಂಖ್ಯಾತರ ಹಕ್ಕು ರಕ್ಷಣೆ ನಮ್ಮ ಮೊದಲ ಆದ್ಯತೆ ಎಂದು ಹಿಂದಿನ ಯುಪಿಎ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಹೇಳಿದ್ದರು ಎಂದು ನೆನಪಿಸಿದರು. ಎಲ್ಲರ ಆಸ್ತಿ ವಶಪಡಿಸಿ ಮರುಹಂಚಿಕೆ ಮಾಡುವುದಾಗಿ ಹೇಳಿದ್ದರು. ಇವರ ಆಸ್ತಿ ಮೊದಲು ಮರುಹಂಚಿಕೆ ಮಾಡಲಿ ಎಂದು ಆಗ್ರಹಿಸಿದರು. ಇವರು ಜನರ ಆಸ್ತಿ ನುಂಗಿದವರು. ಇಂಥ ಹೇಳಿಕೆ ಕೊಡಲು ಇವರಿಗೆಷ್ಟು ಧೈರ್ಯ ಇರಬೇಕು. ಇವರ ಮನಸ್ಥಿತಿ ಏನಿದೆ ಎಂದು ಅರ್ಥವಾಗುತ್ತದೆ ಎಂದರು.

ಬಿಜೆಪಿ ಎಲ್ಲರನ್ನು ಸಮಾನರಾಗಿ ಕಾಣುತ್ತದೆ. ಬಡವರಿಗೆ ಮೊದಲನೇ ಹಕ್ಕು ಇರಬೇಕು. ಆದರೆ, ಕಾಂಗ್ರೆಸ್ಸಿನವರು ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು ಎನ್ನುವ ಮೂಲಕ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದ್ದಾರೆ. ಅವರು ಬಡವರ ವಿರೋಧಿ ಎಂದು ಪ್ರಶ್ನೆಗೆ ಉತ್ತರಿಸಿದರು.

ಕಾನೂನುಬಾಹಿರವಾಗಿ ಹಣ ವಶಕ್ಕೆ..

ಬಿಜೆಪಿಯ 2 ಕೋಟಿ ಹಣ ವಶ ಪಡಿಸಿಕೊಂಡಿದ್ದಾರೆ. ವಾಹನ ಚಾಲಕನ ಬಳಿ ಎಲ್ಲ ದಾಖಲೆಗಳಿದ್ದವು. ಯಾವ ಬ್ಯಾಂಕಿನಿಂದ ಹಣ ಡ್ರಾ ಆಗಿದೆ ಎಂಬ ವಿವರ ಇದ್ದವು. ವಾಹನ ಸಂಖ್ಯೆ, ಬ್ಯಾಂಕ್ ವಿವರ, ಎಲ್ಲವೂ ಇದ್ದವು. ಆದಾಯ ತೆರಿಗೆ ಇಲಾಖೆಯವರು ಕಾನೂನುಬದ್ಧ ಎಂದರೂ ಮಾತು ಕೇಳಿಲ್ಲ. ಹಣವನ್ನು ಕಾನೂನುಬಾಹಿರವಾಗಿ ಪೊಲೀಸ್ ವಶದಲ್ಲಿ ಇಟ್ಟುಕೊಂಡಿದ್ದಾರೆ. ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ತಿಳಿಸಿದರು.

ಕಾಂಗ್ರೆಸ್ ಮುಕ್ತ ದೇಶ ಮಾಡಬೇಕಿದೆ. ನಮ್ಮ ಸಮಾಜಕ್ಕೆ ಕಾಂಗ್ರೆಸ್ ಕೊಡುಗೆ ಏನೆಂದು ನಮ್ಮ ಪಕ್ಷದ ಜಾಹೀರಾತು ತಿಳಿಸಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನಾವು ಬಿಜೆಪಿಗೆ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು. ಇಂಥ ಸಿ.ಇ.ಟಿ. ಪರೀಕ್ಷೆ ಇಲ್ಲಿನವರೆಗೆ ನಡೆದಿಲ್ಲ. ಕಾಂಗ್ರೆಸ್ ಔಟ್ ಆಫ್ ಸಿಲೆಬಸ್. ಪರೀಕ್ಷೆಯೂ ಔಟ್ ಆಫ್ ಸಿಲೆಬಸ್. ಈ ಸರಕಾರ ನಿದ್ರೆಯಲ್ಲೇ ಇದೆ. ಇದು ಆತಂಕಕಾರಿ ಎಂದು ತಿಳಿಸಿದರು. ಪಿಎಫ್‍ಐ, ಎಸ್‍ಡಿಪಿಐ ಓಲೈಕೆ ಮಾಡುವ ಪಕ್ಷ ಕಾಂಗ್ರೆಸ್ ಎಂದು ಟೀಕಿಸಿದರು.

ಬೆಂಗಳೂರೆಂಬ ಟೆಕ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದ್ದಾರೆ. ನೀರು ಸರಾಗ, ಸುಲಭವಾಗಿ ಸಿಗುತ್ತಿತ್ತು. ಕಾಂಗ್ರೆಸ್ಸಿಗರು ಟ್ಯಾಂಕರ್ ದರ ಏರಿಸಿದ್ದಾರೆ. ಸರಕಾರದ ದುಡ್ಡಲ್ಲಿ ಮತ ಹಾಕುವವರಿಗೆ ನೀರು ಕೊಡುವುದಾಗಿ ಹೇಳಿ ಆಡಳಿತ ದುರ್ಬಳಕೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ರಾಜ್ಯ ಚುನಾವಣಾ ಆಯೋಗವು ಕಾಟಾಚಾರಕ್ಕಷ್ಟೇ ಎಫ್‍ಐಆರ್ ಹಾಕುತ್ತಿದೆ. ರಾಜ್ಯ ಆಡಳಿತ ಯಂತ್ರ ಕಾಂಗ್ರೆಸ್ಸಿನ ಕೈಗೊಂಬೆಯಾಗಿದೆ. ಸರಕಾರವೇ ಬೇಲಿಯೆದ್ದು ಹೊಲ ಮೇಯುವಂತಾಗಿದೆ ಎಂದು ದೂರಿದರು.

ಗ್ರಾಮಾಂತರ ಕ್ಷೇತ್ರವನ್ನು ಅತಿ ಸೂಕ್ಷ್ಮ ಕ್ಷೇತ್ರ ಎಂದು ಪರಿಗಣಿಸಲು ಆಗ್ರಹಿಸಲಾಗಿದೆ. ರಾಜ್ಯ ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದೆ. ಶಿವಕುಮಾರ್ ಮೇಲೆ ಎಷ್ಟೋ ವಿಡಿಯೋಗಳಿದ್ದರೂ, ಸಾಕ್ಷಿಗಳಿದ್ದರೂ ಕ್ರಮ ಕೈಗೊಂಡಿಲ್ಲ. ಪೊಲೀಸರಂತೂ ಸಂಪೂರ್ಣವಾಗಿ ಆಡಳಿತ ಯಂತ್ರದ ಜೊತೆ ಕೈಜೋಡಿಸಿದ್ದಾರೆ ಎಂದು ವಿವರಿಸಿದರು. ಎಲ್ಲ ಕಡೆ ಹಣ ಹಂಚುವ ಕಾಂಗ್ರೆಸ್‍ನವರು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡುವುದರಿಂದ ಏನೂ ಪ್ರಯೋಜನ ಇಲ್ಲ ಎಂದು ಮತ್ತೆ ಸ್ಪಷ್ಟಪಡಿಸಿದರು.

ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಮಾಳವಿಕಾ ಅವಿನಾಶ್, ಎಂಎಲ್‍ಸಿ ಛಲವಾದಿ ನಾರಾಯಣಸ್ವಾಮಿ, ಪ್ರಮುಖರು ಭಾಗವಹಿಸಿದ್ದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login