Academic Maladministration Under Congress Rule: Arun Shahapur's Objection


14-05-2024
Press Release

Download Document

14-5-2024

 

ಪ್ರಕಟಣೆಯ ಕೃಪೆಗಾಗಿ

 

ಕಾಂಗ್ರೆಸ್ ಆಡಳಿತದಲ್ಲಿ ಶೈಕ್ಷಣಿಕ ದುರಾಡಳಿತ: ಅರುಣ್ ಶಹಾಪೂರ ಆಕ್ಷೇಪ

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದು ಒಂದು ವರ್ಷ ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರವು ತನ್ನ ದುರಾಡಳಿತದ ಮೂಲಕ ಶಿಕ್ಷಣ ಕ್ಷೇತ್ರವನ್ನು ಹಾಳುಗಡೆವಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪೂರ ಅವರು ಆಕ್ಷೇಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಶಿಕ್ಷಣ ವ್ಯವಸ್ಥೆಯಡಿ ರಾಜ್ಯ ಪಠ್ಯಕ್ರಮದಲ್ಲಿ 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 9 ಲಕ್ಷದಷ್ಟು ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಕರ್ನಾಟಕ ಸರಕಾರ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಇಲಾಖೆಯನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ ಎಂದು ಟೀಕಿಸಿದರು. 1 ಕೋಟಿ ಮಕ್ಕಳ ಭವಿಷ್ಯವನ್ನು ಅತಂತ್ರಕ್ಕೆ ತಳ್ಳುವ ಕೆಲಸ ಮಾಡಿದ್ದಾರೆ ಎಂದು ದೂರಿದರು.

10ನೇ ತರಗತಿ ಪರೀಕ್ಷೆ ಬರೆದ 9 ಲಕ್ಷದಷ್ಟು ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕದಲ್ಲಿದ್ದಾರೆ. ಕೆಎಸ್‍ಇಎಪಿ ಮೂಲಕ ಪರೀಕ್ಷೆ ನಡೆಸಿದ್ದಾರೆ. ಯಶಸ್ವಿ ಪರೀಕ್ಷೆ ನಡೆಸಿದ್ದಾಗಿ ಹೇಳಿದ್ದಾರೆ. ಸ್ವಾತಂತ್ರ್ಯ ಬಂದ ಬಳಿಕ ಅತ್ಯಂತ ಕೆಟ್ಟ ಪರೀಕ್ಷೆ ನಡೆದಿದ್ದರೆ ಅದು ಮಧು ಬಂಗಾರಪ್ಪ ಅವರ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಎಂದು ಅವರು ವಿಷಾದದಿಂದ ತಿಳಿಸಿದರು. ದಿಕ್ಕು ದೆಸೆಯಿಲ್ಲದ ಶಿಕ್ಷಣವನ್ನು ನಿರ್ಮಿಸಿದ್ದಾರೆ ಎಂದು ಟೀಕಿಸಿದರು.

ಸೂತ್ರದ ಗೊಂಬೆಯಾಗಿದ್ದ ಶಿಕ್ಷಣ ಸಚಿವರು..

ಪಠ್ಯಪುಸ್ತಕದಲ್ಲಿನ ಪಾಠಗಳನ್ನು ಕಿತ್ತು ಹಾಕುವುದಾಗಿ ಹೇಳುವ ಮೂಲಕ ಈ ಸರಕಾರ ಕಾರ್ಯಾರಂಭ ಮಾಡಿದೆ. ಶಿಕ್ಷಣ, ಪಠ್ಯದ ವಿಚಾರ ಶಿಕ್ಷಣ ತಜ್ಞರ ಮಟ್ಟದಲ್ಲಿ, ಇಲಾಖೆ ಮಟ್ಟದಲ್ಲಿ ನಿರ್ಧಾರವಾಗುತ್ತಿತ್ತು. ಆದರೆ, ಕಳೆದ ವರ್ಷ ಅದು ಕ್ಯಾಬಿನೆಟ್‍ನಲ್ಲಿ ನಿರ್ಧಾರವಾಗಿದೆ. ಇವರು ಕನ್ನಡದ 10 ಪಾಠ, ಸಮಾಜ ವಿಜ್ಞಾನದ 10 ಪಾಠಗಳನ್ನು ತೆಗೆದುಹಾಕಿ ಮೊಟ್ಟ ಮೊದಲ ಬಾರಿಗೆ ರಾಜಕೀಯಕರಣಗೊಳಿಸುವ ಕಾರ್ಯಕ್ಕೆ ಈಗಿನ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಕೈ ಹಾಕಿದ್ದರು. ಶಿಕ್ಷಣ ಸಚಿವರು ಸೂತ್ರದ ಗೊಂಬೆಯಾಗಿದ್ದರು ಎಂದು ಅರುಣ್ ಶಹಾಪೂರ ಅವರು ವಿವರಿಸಿದರು.

ಕಾಂಗ್ರೆಸ್ ಪಕ್ಷ ಇವತ್ತು ಇಡೀ ಕರ್ನಾಟಕದಲ್ಲಿ ಚುನಾವಣಾ ಚಾಣಕ್ಯರ ಕಪಿಮುಷ್ಟಿಗೆ ಸಿಲುಕಿದೆ. ಚುನಾವಣಾ ಚಾಣಕ್ಯರೇ ಕಾಂಗ್ರೆಸ್ಸಿನ ನೀತಿ ನಿರೂಪಿಸುತ್ತಿದ್ದಾರೆ. ಪಾಠಗಳು ಯಾವುದೇ ಶಾಲೆಯಲ್ಲಿ ಮಕ್ಕಳ ವರೆಗೆ ತಲುಪಲಿಲ್ಲ. ಎನ್‍ಇಪಿ ಜಾರಿ ಇಲ್ಲ ಎಂಬ ಗೊಂದಲಗಳಿಗೆ ಕೈಹಾಕಿದ್ದರು. ಕೊನೆಗೆ ಪರೀಕ್ಷೆಯು ಪ್ರಹಸನ ಎಂಬಂತೆ ನಡೆದಿದೆ ಎಂದು ತಿಳಿಸಿದರು. 5 ನೇ ತರಗತಿ, 8 ನೇ ತರಗತಿ, 9 ನೇ ತರಗತಿ, 11ನೇ ತರಗತಿ ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎಂಬ ವಿಚಾರ ದಿನವೂ ಬೆಳಿಗ್ಗೆ ಪಾಲಕರಿಗೆ ತಲೆನೋವಾಗಿ ಪರಿಗಣಮಿಸಿತ್ತು ಎಂದು ತಿಳಿಸಿದರು.

ಹೈಕೋರ್ಟ್, ಸುಪ್ರೀಂ ಕೋರ್ಟ್, ವಿಭಾಗೀಯ ಪೀಠ- ಹೀಗೆ ಸಮಸ್ಯೆಯನ್ನು ಪ್ರಶ್ನಿಸಲಾಯಿತು. ಆಡಳಿತ ನಡೆಸುವವರಿಗೆ ಈ ರೀತಿಯ ದೃಢ ನಿರ್ಣಯ ತೆಗೆದುಕೊಳ್ಳುವ ಮೊದಲು ಕೋರ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಸಾಮಾನ್ಯ ಜ್ಞಾನ ಈ ಸರಕಾರಕ್ಕೆ ಇದೆಯೇ ಎಂದು ಪ್ರಶ್ನಿಸಿದರು. ಅವರು ಅಲ್ಲಿ ಎಡವಿದರು ಎಂಬ ಕಾರಣಕ್ಕೆ 1 ಕೋಟಿ ಮಕ್ಕಳು ಮತ್ತು ಅವರ ಪಾಲಕರಿಗೆ ಒತ್ತಡ ಕೊಡುವ ಕೆಲಸವನ್ನು ಈ ಸರಕಾರ ಮಾಡಿತ್ತು ಎಂದು ಟೀಕಿಸಿದರು.

ಈ ಪರೀಕ್ಷೆಗಳ ಬಗ್ಗೆ ಈಗಲೂ ದೃಢ ನಿಲುವನ್ನು ಈ ಸರಕಾರ ತೆಗೆದುಕೊಂಡಿಲ್ಲ. 10ನೇ ತರಗತಿ ಹಾಗೂ ಪಿಯುಸಿಗೆ 3 ಪರೀಕ್ಷೆ (10- 1,2,3), (ಪಿಯು- 1,2,3) ಮಾಡಲು ಹೊರಟವರು ಮಕ್ಕಳ, ಪಾಲಕರ ಒತ್ತಡ, ಗೊಂದಲವನ್ನು ಯೋಚಿಸಿಲ್ಲ. ಯಾವ ಪರೀಕ್ಷೆ, ಪರೀಕ್ಷೆ ಬರೆದವರು ಯಾರು, ಯಾರಿಂದ ಮೌಲ್ಯಮಾಪನ ಎಂಬ ದೊಡ್ಡ ಗೊಂದಲಕ್ಕೆ ಇದು ಕಾರಣವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇಲಾಖೆಗೂ ಈ ಕುರಿತು ಸ್ಪಷ್ಟತೆ ಇಲ್ಲ. 3 ಪರೀಕ್ಷೆ ಇವರೇನು ಪುಕ್ಕಟೆ ಮಾಡುತ್ತಾರಾ ಎಂದು ಕೇಳಿದರು.

ಪರೀಕ್ಷೆ ಎಂದರೆ ಸರಕಾರಕ್ಕೆ ಒಂದು ಉದ್ಯಮವೇ?

ಒಂದು ಪರೀಕ್ಷೆಗೆ ರೂ. 410, 2 ಪರೀಕ್ಷೆಗೆ 510, 3 ಆದರೆ 710 ರೂ. ಪಾವತಿಸಬೇಕು. ಪರೀಕ್ಷೆ ಎಂದರೆ ಸರಕಾರಕ್ಕೆ ಒಂದು ಉದ್ಯಮವೇ? ಪ್ರತಿಯೊಂದು 10ನೇ ಪರೀಕ್ಷೆ ನಡೆಯುವ ಕೇಂದ್ರಕ್ಕೆ ವೆಬ್ ಕಾಸ್ಟಿಂಗ್ ಅಳವಡಿಸಲು ಆದೇಶ ಮಾಡಿ ಒತ್ತಡ ಹೇರುವ ಹಾಗೂ ಯಾಕಾದರೂ ಪರೀಕ್ಷಾ ಕೇಂದ್ರ ಮಾಡಿದ್ದೇವೋ ಎಂದು ಯೋಚಿಸುವ ಪರಿಸ್ಥಿತಿಯನ್ನು ಸರಕಾರ ನಿರ್ಮಿಸಿತ್ತು ಎಂದು ದೂರಿದರು.

ಪರೀಕ್ಷೆ ಸಂದರ್ಭದಲ್ಲಿ ಎಲ್ಲಿ ತಮ್ಮ ನೌಕರಿಗೆ ಕುತ್ತಾಗುವುದೋ ಎಂಬ ಆತಂಕ ಶಿಕ್ಷಕರಲ್ಲಿತ್ತು. ವೆಬ್ ಕಾಸ್ಟಿಂಗ್ ಬಗ್ಗೆ ಯಾವುದೇ ಶಿಕ್ಷಕರಿಗೆ ಪರಿಕಲ್ಪನೆ ಇರಲಿಲ್ಲ. ತರಬೇತಿ, ಮಾಹಿತಿಯೂ ಇರಲಿಲ್ಲ ಎಂದು ಅವರು ನುಡಿದರು.

ಬಿಇಒ, ಡಿಡಿಪಿಐ, ಕಮೀಷನರ್‍ಗಳ ಮೂಲಕ ಒತ್ತಡ ಹೇರಿ ಶಿಕ್ಷಕರ ದಮನ ಮಾಡಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮೂಲಕ ಪರೀಕ್ಷಾ ಕೇಂದ್ರಗಳನ್ನು ನಡೆಸುವ ಕೆಲಸ ಮಾಡಿದ್ದರು. ಇದರ ಪರಿಣಾಮವಾಗಿ ಕ್ಯಾಮೆರಾ ಹಾಕಿ ಪರೀಕ್ಷೆ ಬರೆದ ಮಕ್ಕಳಿಗೆ ಗೊಂದಲ ಉಂಟಾಗಿದೆ. ಸಿಟ್ಟಿಂಗ್ ಸ್ಕ್ವಾಡ್, ಫ್ಲೈಯಿಂಗ್ ಸ್ಕ್ವಾಡ್, ವೆಬ್ ಕಾಸ್ಟಿಂಗ್ ಉಳ್ಳ 10 ನೇ ಪರೀಕ್ಷೆ ಎಂದರೆ ಅದು ಯುಪಿಎಸ್‍ಸಿ ಪರೀಕ್ಷೆಗಿಂತ ದೊಡ್ಡದೇ ಎಂದು ಅವರು ಪ್ರಶ್ನೆಯನ್ನು ಮುಂದಿಟ್ಟರು.

10ನೇ ತರಗತಿ ಪರೀಕ್ಷೆ ಎಂದರೆ ಮಕ್ಕಳನ್ನು ಭಯದ ವಾತಾವರಣದಲ್ಲಿ ಇಡಲಾಯಿತು. 10ನೇ ತರಗತಿ ಪರೀಕ್ಷೆಯಲ್ಲಿ ನೈಜ ಮೌಲ್ಯಮಾಪನ ಮಾಡಿದ್ದರೆ ಫಲಿತಾಂಶ ಪಾತಾಳಕ್ಕೆ ಕುಸಿಯಲಿದೆ ಎಂಬುದು ಅವರಿಗೆ ಅರ್ಥವಾಯಿತು. ಇಡೀ ರಾಜ್ಯದ ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ಡಯಟ್ ಮತ್ತು ಇಲಾಖೆಯನ್ನು ಕತ್ತಲಲ್ಲಿ ಇಡಲಾಯಿತು. ಇವರು ಸ್ಥಾಪಿಸಿದ ಕೆಎಸ್‍ಇಇ ಮೂಲಕ ಉತ್ತೀರ್ಣ ಅಂಕವನ್ನು 35ರಿಂದ 25ಕ್ಕೆ ಇಳಿಸಿದ್ದಾರೆ. ಇದು ಶಿಕ್ಷಣ ಕ್ಷೇತ್ರ ಹಾಳು ಮಾಡಿದ ಈ ಸರಕಾರದ ಸಾಧನೆ ಎಂದು ಟೀಕಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಪಿ. ರಾಜೀವ್, ರಾಜ್ಯ ವಕ್ತಾರೆ ಕು. ಸುರಭಿ ಹೊದಿಗೆರೆ ಅವರು ಉಪಸ್ಥಿತರಿದ್ದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login