Priority areas like infrastructure and education have not been given attention.. A budget that does not satisfy any section of people - Vijayendra's analysis


14-03-2025
Press Release

Download Document

14-3-2025

ಪ್ರಕಟಣೆಯ ಕೃಪೆಗಾಗಿ

 

ಮೂಲಸೌಕರ್ಯ, ಶಿಕ್ಷಣದಂಥ ಆದ್ಯತಾ ಕ್ಷೇತ್ರಗಳಿಗೂ ಗಮನ ಹರಿಸಿಲ್ಲ..

ಯಾವುದೇ ವರ್ಗದ ಜನರಿಗೂ ಸಂತೃಪ್ತಿ ನೀಡದ ಬಜೆಟ್- ವಿಜಯೇಂದ್ರ ವಿಶ್ಲೇಷಣೆ

 

ಬೆಂಗಳೂರು: ಮುಖ್ಯಮಂತ್ರಿಗಳು ಮತ್ತು ಹಣಕಾಸಿನ ಸಚಿವರು ಮಂಡಿಸಿದ ಬಜೆಟ್ ಅವಲೋಕನ ಮಾಡಿದರೆ ಈ ಆಯವ್ಯಯ ಪತ್ರವು ರಾಜ್ಯದ ಯಾವುದೇ ವರ್ಗದ ಜನರಿಗೆ ಸಂತೃಪ್ತಿ ತಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ವಿಧಾನಸಭಾ ಅಧಿವೇಶನದಲ್ಲಿ ಇಂದು ಮಾತನಾಡಿದ ಅವರು, ನಾಡಿನ ಕೃಷಿಕರು, ಬಡವರು, ಮಹಿಳೆಯರು, ಯುವಕರು ಸೇರಿ ಎಲ್ಲರಿಗೂ ಈ ಬಜೆಟ್ ನಿರಾಸೆಯನ್ನು ತಂದಿದೆ. ಯಾವುದೇ ಆದ್ಯತಾ ಕ್ಷೇತ್ರಗಳಿಗೂ ಗಮನ ಹರಿಸಿಲ್ಲ ಎಂದು ಟೀಕಿಸಿದರು.

ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ ಕ್ಷೇತ್ರ, ಕೃಷಿ, ನೀರಾವರಿ ಕಡೆ ಹೆಚ್ಚಿನ ಕಾಳಜಿ ತೋರಿಸಿಲ್ಲ; ಕೃಷಿ ಕ್ಷೇತ್ರದಲ್ಲಿ ರೈತರು ಪರದಾಡುತ್ತಿದ್ದಾರೆ. ಅಡಿಕೆ ರೋಗ, ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದರೂ ಹಣಕಾಸಿನ ಸಚಿವರು ಇದರ ಬಗ್ಗೆ ಗಮನ ಹರಿಸಿಲ್ಲ ಎಂದು ವಿವರಿಸಿದರು.

ಕೃಷ್ಣೆಯ ಬಗ್ಗೆ ಕೂಡ ಚಕಾರ ಎತ್ತಿಲ್ಲ..

ನೀರಾವರಿ ಬಗ್ಗೆ ಸದನದ ಒಳಗೆ ಮತ್ತು ಹೊರಗಡೆ ಚರ್ಚೆ ಆಗಿದೆ. ಹಿಂದೆ ‘ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ’ ಎಂದು ತಿಳಿಸಿ, ರಾಜ್ಯದಲ್ಲಿ ಸರಕಾರ ಅಧಿಕಾರಕ್ಕೆ ಬಂದರೆ, ಪ್ರತಿ ವರ್ಷ 10 ಸಾವಿರ ಕೋಟಿಯಂತೆ ಒಟ್ಟು 50 ಸಾವಿರ ಕೋಟಿ ಕೊಡುವುದಾಗಿ ಹಾಗೂ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು ಎಂದು ವಿಜಯೇಂದ್ರ ಗಮನ ಸೆಳೆದರು. ಆದರೆ, ಕೃಷ್ಣೆಯ ಬಗ್ಗೆ ಕೂಡ ಚಕಾರ ಎತ್ತಿಲ್ಲ. ಇದು ನಿಜವಾಗಿಯೂ ದುರದೃಷ್ಟಕರ ಎಂದರು.

ರಾಜ್ಯದಲ್ಲಿ ಈ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಮರೀಚಿಕೆಯಾಗಿದೆ. ಬೆಲೆ ಏರಿಕೆಯ ಪರಿಣಾಮವಾಗಿ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಜನರ ಜೀವನದ ಮೇಲೆ ಬರೆ ಎಳೆಯುವ ಕೆಲಸವನ್ನು ರಾಜ್ಯ ಸರಕಾರ ಮಾಡಿರುವುದು ಈ ಬಜೆಟ್‍ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಹಣಕಾಸಿನ ಮುಗ್ಗಟ್ಟಿನಿಂದ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಪರಿಸ್ಥಿತಿಗೆ ರಾಜ್ಯ ಬಂದು ನಿಂತಿದೆ. ಇದು ದುರ್ದೈವ. ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಗಮನ ಕೊಡುತ್ತಿಲ್ಲ. ಚೀನಾದಂಥ ದೇಶದಿಂದ 1500ಕ್ಕೂ ಹೆಚ್ಚು ವಿಜ್ಞಾನಿಗಳು ಹೊರಬರುತ್ತಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಹೆಸರುವಾಸಿಯಾದ ನಮ್ಮ ರಾಜ್ಯದಲ್ಲಿ ವಿಜ್ಞಾನ ಕಲಿಕೆಗೆ ಹೆಚ್ಚು ಗಮನ ಕೊಡುತ್ತಿಲ್ಲ ಎಂದು ವಿವರಿಸಿದರು.

46,757 ಸರಕಾರಿ ಶಾಲೆಗಳಲ್ಲಿ 43 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 16,450 ಖಾಸಗಿ ಶಾಲೆಗಳಲ್ಲಿ 47 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಸರಕಾರ ಶಿಕ್ಷಣದ ಕುರಿತು ಯಾವ ರೀತಿ ಗಮನ ಹರಿಸುತ್ತಿದೆ ಎಂಬುದರ ಕುರಿತು ಗಮನ ಹರಿಸಬೇಕಿದೆ; ಚರ್ಚೆಯೂ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಅನೇಕ ವಿಶ್ವವಿದ್ಯಾಲಯಗಳಲ್ಲಿ ಸಾವಿರಾರು ಸಂಖ್ಯೆಯ ಅರೆಕಾಲಿಕ ಉಪನ್ಯಾಸಕರಿದ್ದಾರೆ. ಒಂದು ಕಡೆ ಕಡಿಮೆ ವೇತನ, ಮತ್ತೊಂದು ಕಡೆ ಸೇವಾ ಭದ್ರತೆ ಇಲ್ಲದೆ ಅವರು ಕೂಡ ಪರದಾಡುತ್ತಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರಕಾರ ಗಮನಿಸದೆ ಇರುವುದು ದುರ್ದೈವ ಎಂದು ಹೇಳಿದರು.

ಪ್ರಾದೇಶಿಕ ಅಸಮತೋಲನದ ಕುರಿತು..

ಪ್ರಾದೇಶಿಕ ಅಸಮತೋಲನದ ಕುರಿತು ಹೆಚ್ಚೆಚ್ಚು ಚರ್ಚೆ ಆಗಿದೆ. ಆದರೆ, ಮುಖ್ಯಮಂತ್ರಿಗಳು ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮತೋಲನ ವಿಷಯದಲ್ಲಿ ಹೆಚ್ಚು ಗಮನ ಹರಿಸದೆ ಇರುವುದು ದುರ್ದೈವ ಎಂದು ವಿಜಯೇಂದ್ರ ಅವರು ಗಮನ ಸೆಳೆದರು.

2004-05ರಲ್ಲಿ ಸಿದ್ದರಾಮಯ್ಯನವರು ಮೊದಲ ಬಜೆಟ್ ಮಂಡಿಸಿದಾಗ ಬಜೆಟ್ ಗಾತ್ರ ಸುಮಾರು 13- 14 ಸಾವಿರ ಕೋಟಿ ಇತ್ತು. ಆದರೆ, ಇವತ್ತು 16ನೇ ಬಜೆಟ್ ಮಂಡಿಸಿದ್ದು 4 ಲಕ್ಷದ 9 ಸಾವಿರ ಕೋಟಿ. ಈ ಬಾರಿ ಕೊರತೆ ಬಜೆಟ್ ಮಂಡಿಸಲಾಗಿದೆ ಎಂದು ವಿವರಿಸಿದರು.

 

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please लॉगिन