What is Siddaramaiah's contribution to the state?: Vijayendra questions


07-04-2025
Press Release

Download Document

7-4-2025

 

ಪ್ರಕಟಣೆಯ ಕೃಪೆಗಾಗಿ

 

ಭ್ರಷ್ಟ ಕಾಂಗ್ರೆಸ್ ಸರಕಾರ ಕಿತ್ತೊಗೆಯುವ ಸಂಕಲ್ಪ- ಪ್ರಲ್ಹಾದ್ ಜೋಶಿ

ರಾಜ್ಯಕ್ಕೆ ಸಿದ್ದರಾಮಯ್ಯನವರ ಕೊಡುಗೆ ಏನು?: ವಿಜಯೇಂದ್ರ ಪ್ರಶ್ನೆ

ಮೈಸೂರು: ಕಾಂಗ್ರೆಸ್ಸಿನದು ಬಡವರ ವಿರೋಧಿ, ಜನವಿರೋಧಿ, ರೈತ ವಿರೋಧಿ, ಹಿಂದೂ ವಿರೋಧಿ ದರಿದ್ರ ಸರಕಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದರು.

ಜನಾಕ್ರೋಶ ಯಾತ್ರೆ ಆರಂಭದ ಸಂಬಂಧ ಇಂದು ಇಲ್ಲಿನ ಗಾಂಧಿ ಸ್ಕ್ವೇರ್ ನಲ್ಲಿ ಬಹಿರಂಗ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ಹತ್ತಾರು ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರು ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು ಎಂದು ಜನತೆ ಪ್ರಶ್ನಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. ನೀವೇನು ಅಭಿವೃದ್ಧಿ ಕೆಲಸ ಮಾಡಿದ್ದೀರೆಂದು ರಾಜ್ಯದ ಜನರು ಕೇಳುತ್ತಿದ್ದಾರೆ ಎಂದರು.

ಸ್ವಕ್ಷೇತ್ರ ಇರುವ ಮೈಸೂರು ಜಿಲ್ಲೆಗೆ ಮುಖ್ಯಮಂತ್ರಿಗಳು ಅಭಿವೃದ್ಧಿಗೆ ಹಣವನ್ನೇ ನೀಡಿಲ್ಲ; ಯಡಿಯೂರಪ್ಪ ಅವರು ಹಿಂದಿನ ಬಿಜೆಪಿ ಆಡಳಿತದಲ್ಲಿ ಸಿಎಂ ಆಗಿದ್ದಾಗ ಸಾವಿರಾರು ಕೋಟಿ ರೂ. ಕೊಟ್ಟಿದ್ದರು ಎಂದು ವಿವರಿಸಿದರು. ಬಿಜೆಪಿ ಪ್ರಾರಂಭ ಮಾಡಿದ ಈ ಹೋರಾಟವು ನಾಡಿನ ಜನರ ಧ್ವನಿಯಾಗಲಿದೆ ಎಂದು ಎಚ್ಚರಿಸಿದರು.

ಬೆಲೆ ಏರಿಕೆ ಮೂಲಕ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಸರಕಾರ ಅಳವಡಿಸಿಕೊಂಡಿದೆ. ಜನವಿರೋಧಿ ಕಾಂಗ್ರೆಸ್ ಸರಕಾರ ಮತ್ತು ಜನವಿರೋಧಿ ಮುಖ್ಯಮಂತ್ರಿಗಳ ಧೋರಣೆಯನ್ನು ಜನರಿಗೆ ಮನವರಿಕೆ ಮಾಡಿಕೊಡಲು ಈ ಯಾತ್ರೆ ನಡೆಯುತ್ತಿದೆ ಎಂದು ವಿವರಿಸಿದರು.

ಅಧಿಕಾರಕ್ಕೆ ಬರುವ ಮೊದಲು ಅಹಿಂದ ಎಂದು ಭಾಷಣ ಮಾಡುತ್ತಿದ್ದ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ಬಳಿಕ ಹಿಂದುಳಿದ ಸಮಾಜಗಳನ್ನೇ ಮರೆತರು. ಅವರಿಗೆ ಯಾವುದೇ ಯೋಜನೆಗಳನ್ನು ಕೊಟ್ಟಿಲ್ಲ. ದಲಿತರ ಅಭ್ಯುದಯಕ್ಕೆ ಬಳಕೆ ಆಗಬೇಕಿದ್ದ 38 ಸಾವಿರ ಕೋಟಿ ಎಸ್‍ಇಟಿ, ಟಿಎಸ್‍ಪಿ ಹಣವನ್ನು ಸಿದ್ದರಾಮಯ್ಯನವರು ಬೇರೆ ಕಡೆ ವರ್ಗಾವಣೆ ಮಾಡಿದ್ದಾರೆ ಎಂದು ಟೀಕಿಸಿದರು. ಸಿದ್ದರಾಮಯ್ಯನವರು ಕೇವಲ ಅಲ್ಪಸಂಖ್ಯಾತ ನಾಯಕರಾಗಲು ಹೊರಟಿದ್ದಾರೆ ಎಂದು ಆಕ್ಷೇಪಿಸಿದರು.

ಬೆಲೆ ಏರಿಕೆ, ಹಗರಣಗಳ ಸರಕಾರ- ಪ್ರಲ್ಹಾದ್ ಜೋಶಿ ಟೀಕೆ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಭ್ರಷ್ಟ ಕಾಂಗ್ರೆಸ್ ಸರಕಾರ ಕಿತ್ತೊಗೆಯುವ ಸಂಕಲ್ಪದೊಂದಿಗೆ ಈ ರ್ಯಾಲಿ ನಡೆಯುತ್ತಿದೆ ಎಂದು ತಿಳಿಸಿದರು. ಗೃಹಲಕ್ಷ್ಮಿ ಬಾಕಿ ಕೂಡಲೇ ಕೊಡಿ, ಹಾಲಿನ ಸಬ್ಸಿಡಿ ತಕ್ಷಣ ವಿತರಿಸಿ ಎಂದು ಆಗ್ರಹಿಸಿದರು.

ನಮ್ಮ ರಾಜ್ಯದಲ್ಲಿ ಹುಟ್ಟಲು ಮತ್ತು ಸಾಯಲೂ ಯೋಚಿಸುವ ಸ್ಥಿತಿ ಬಂದಿದೆ. ಜನನ- ಮರಣ ಪ್ರಮಾಣಪತ್ರದ ಶುಲ್ಕವನ್ನೂ ತೀವ್ರವಾಗಿ ಹೆಚ್ಚಿಸಿದ್ದಾರೆ ಎಂದು ಟೀಕಿಸಿದರು. ಇಲ್ಲಿನವರೆಗೆ 48 ವಸ್ತುಗಳ ಬೆಲೆ ಏರಿಕೆ ಮಾಡಿ ಇತಿಹಾಸ ಸೃಷ್ಟಿಸಿದ ಸುಳ್ಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಳ್ಳ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಆಕ್ಷೇಪಿಸಿದರು.

ಇವರು ಎಂಥ ಧೂರ್ತರಿದ್ದಾರೆ; ಲಜ್ಜೆಗೆಟ್ಟವರಿದ್ದಾರೆ ಎಂದರೆ, ಕೇರಳದ ವಯನಾಡಿನಲ್ಲಿ ಆನೆ ತುಳಿತಕ್ಕೆ ಒಳಗಾಗಿ ಒಬ್ಬರು ಮೃತರಾದರು. ಆನೆ ನಮ್ಮದೆಂದು ಹೇಳಿ 25 ಲಕ್ಷ ಪರಿಹಾರ ಕೊಟ್ಟರು. ಕರ್ನಾಟಕದಲ್ಲಿ ಜನರು ಸತ್ತರೆ 5 ಲಕ್ಷ, ಅಲ್ಲಿ ಅದು ಪ್ರಿಯಾಂಕಾ ವಾಧ್ರಾ ಕ್ಷೇತ್ರ ಎಂದು ಟೀಕಿಸಿದರು.

ಹಾಲು, ಡೀಸೆಲ್, ಪೆಟ್ರೋಲ್, ರಸ್ತೆ ತೆರಿಗೆ, ಆಲ್ಕೋಹಾಲಿನ ದರವೂ ಏರಿಸಿದ್ದಾರೆ. ವಾಹನ ತೆರಿಗೆ, ಆಸ್ಪತ್ರೆ ಬಿಲ್ ಜಾಸ್ತಿ, ಬಸ್ ಟಿಕೆಟ್ ದರವೂ ಹೆಚ್ಚಾಗಿದೆ. ಕರ್ನಾಟಕದ ತೆರಿಗೆಗಳ ಹೆಚ್ಚಳದಿಂದ 70-75 ಸಾವಿರ ಕೋಟಿ ರಾಜಸ್ವ ಸಂಗ್ರಹ ಆಗುವ ಸಾಧ್ಯತೆ ಇದೆ. ಅನ್ನಭಾಗ್ಯದ ದುಡ್ಡನ್ನೂ ಹಾಕಿಲ್ಲ ಎಂದು ದೂರಿದರು. ಒಂದೆಡೆ ಬೆಲೆ ಏರಿಕೆ, ಇನ್ನೊಂದೆಡೆ ಮುಡಾ ಸೇರಿ ಹತ್ತಾರು ಹಗರಣ ಇವರ ಹಣೆಬರಹ ಎಂದು ಆರೋಪಿಸಿದರು.

ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಜಗತ್ತಿನ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದ ಅವರು, ಸುಳ್ಳುಗಳನ್ನು ಹೇಳುವ ಪ್ರವೃತ್ತಿ ಕಾಂಗ್ರೆಸ್ಸಿಗರದು ಎಂದು ಟೀಕಿಸಿದರು. ತ್ರಿವಳಿ ತಲಾಖ್ ರದ್ದತಿ, 370ನೇ ವಿಧಿ ರದ್ದತಿ, ಸಿಎಎ ಜಾರಿ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ಗಲಭೆ ನಡೆಯಲಿದೆ ಎಂದು ಸುಳ್ಳುಗಳನ್ನೇ ಹೇಳಿದ್ದಾಗಿ ಟೀಕಿಸಿದರು. ತುಷ್ಟೀಕರಣ, ಬೆಲೆ ಏರಿಕೆಯ ಈ ಕಾಂಗ್ರೆಸ್ ಪಕ್ಷದ ಸರಕಾರವನ್ನು ಕಿತ್ತು ಹಾಕಬೇಕಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಸೊಳ್ಳೆ ಥರ, ಡಿ.ಕೆ. ಶಿವಕುಮಾರ್ ತಿಗಣೆ ಥರ- ಆರ್.ಅಶೋಕ್

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಬೆಳಿಗ್ಗೆ ಹಾಲು ಕುಡಿದರೆ ಹೆಚ್ಚುವರಿ ತೆರಿಗೆ, ಸಾಯಂಕಾಲ ಬೇಜಾರಾದ್ರೆ 50 ರೂ. ತೆರಿಗೆ, ಕತ್ತಲಾದರೆ ರೇಟ್ ಜಾಸ್ತಿ; ಅವರೂ ಅದೇ ಗಿರಾಕಿ ಅಲ್ವ ಎಂದು ಪ್ರಶ್ನಿಸಿದರು. ಇದು ಜನರ ಹೋರಾಟ, ಬಿಜೆಪಿ ಹೋರಾಟ ಅಲ್ಲ ಎಂದೂ ಸ್ಪಷ್ಟಪಡಿಸಿದರು.

ಇವತ್ತು ನಾವು ರಾಜ್ಯದ ಕಳ್ಳ- ಮಳ್ಳರನ್ನು ಬೀದಿಗೆಳೆಯುವ ಕೆಲಸ ಮಾಡುತ್ತಿದ್ದೇವೆ. ಇವರು ತೆರಿಗೆ ಏರಿಸಿ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸೊಳ್ಳೆ, ಡಿ.ಕೆ. ಶಿವಕುಮಾರ್ ತಿಗಣೆ ಥರ ಎಂದು ಟೀಕಿಸಿದರು.

ಕಾಂಗ್ರೆಸ್ಸನ್ನು ಕಟ್ಟಲು ಕನ್ನಡಿಗರ ದುಡ್ಡು-ಛಲವಾದಿ ನಾರಾಯಣಸ್ವಾಮಿ

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ನೆಲಕಚ್ಚಿದೆ. ಈಗ ಅಲ್ಲಿ ಕಾಂಗ್ರೆಸ್ಸನ್ನು ಕಟ್ಟಲು ಅವರಿಗೆ ಕನ್ನಡಿಗರ ದುಡ್ಡು ಬೇಕಾಗಿದೆ. ಅದಕ್ಕಾಗಿಯೇ ಲೂಟಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹೆಚ್ಚು ಕಪ್ಪ ಕೊಟ್ಟರೆ ಅವರನ್ನೇ ಮುಂದುವರೆಸುವುದು; ಇಲ್ಲವಾದರೆ ಮತ್ತೊಬ್ಬರನ್ನು ಆ ಸ್ಥಾನಕ್ಕೆ ತರಲು ಯೋಜನೆ ಮಾಡುತ್ತಿದ್ದಾರಂತೆ. ನಮ್ಮದು ಅಂಥ ಪಾರ್ಟಿ ಅಲ್ಲ ಎಂದು ವಿವರಿಸಿದರು.

 ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ್ , ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ , ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ ರವಿ, ಮಾಜಿ ಸಚಿವ ಬಿ. ಶ್ರೀರಾಮುಲು, ಸಂಸದ ಯದುವೀರ್ ಕೃಷ್ಣರಾಜದತ್ತ ಒಡೆಯರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ, ಶಾಸಕರಾದ ಭೈರತಿ ಬಸವರಾಜ್ ಹಾಗೂ ಟಿ.ಎಸ್.ಶ್ರೀವತ್ಸ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಮೈಸೂರು ನಗರ ಅಧ್ಯಕ್ಷ ಎಲ್.ನಾಗೇಂದ್ರ, ಮೈಸೂರು ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮುಂತಾದ ಅನೇಕ ಹಿರಿಯ ನಾಯಕರು ಹಾಗೂ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಸುತ್ತಿರುವ 'ಜನಾಕ್ರೋಶ ಯಾತ್ರೆ' ಸಂಬಂಧ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ಈ ಯಾತ್ರೆಯು ಮೈಸೂರಿನ ಎಂಡಿಸಿಸಿ ಬ್ಯಾಂಕ್ ವೃತ್ತದಿಂದ (ಲಷ್ಕರ್ ಪೊಲೀಸ್ ಠಾಣೆ ಸರ್ಕಲ್) ಪ್ರಾರಂಭಗೊಂಡಿತು. ಬಳಿಕ ಅಶೋಕ ರಸ್ತೆ ಮಾರ್ಗವಾಗಿ ಮುಂದುವರೆಯಿತು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please लॉगिन