'Bhima Hejje' 100th Celebration' to be organized on the 11th: N. Mahesh


09-04-2025
Press Release

Download Document

9-4-2025

 

ಪ್ರಕಟಣೆಯ ಕೃಪೆಗಾಗಿ

 

ಬೆಂಗಳೂರಿನಿಂದ ನಿಪ್ಪಾಣಿಗೆ ರಥಯಾತ್ರೆ- ಸಮಾವೇಶಕ್ಕೆ ಸಿದ್ಧತೆ

11ರಂದು ‘ಭೀಮ ಹೆಜ್ಜೆ 100ರ ಸಂಭ್ರಮ’ ಆಯೋಜನೆ: ಎನ್.ಮಹೇಶ್

ಬೆಂಗಳೂರು: ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರು ನಿಪ್ಪಾಣಿಗೆ ಭೇಟಿ ಕೊಟ್ಟು 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಏ. 11ರಂದು ‘ಭೀಮ ಹೆಜ್ಜೆ 100ರ ಸಂಭ್ರಮ’ ಎಂಬ ಜಾಗೃತಿ ಕಾರ್ಯಕ್ರಮವನ್ನು ಬೆಂಗಳೂರಿನಿಂದ ನಿಪ್ಪಾಣಿ ವರೆಗೆ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಅವರು ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು 1925ರ ಏಪ್ರಿಲ್ 10 ಮತ್ತು 11ರಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಭೇಟಿ ನೀಡಿದ್ದರು. ಇದೇ ಏಪ್ರಿಲ್ 10 ಮತ್ತು 11ಕ್ಕೆ 100 ವರ್ಷ ತುಂಬುತ್ತಿದೆ. ಈ 100 ವರ್ಷದ ಕಾರ್ಯಕ್ರಮವನ್ನು ಬಿಜೆಪಿ ವತಿಯಿಂದ ಮಾಡುತ್ತಿದ್ದೇವೆ ಎಂದು ವಿವರಿಸಿದರು. ಅಂಬೇಡ್ಕರರು ಶೋಷಿತ ವರ್ಗಗಳನ್ನು ಸಂಘಟಿಸಿ, ಅವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಶೋಷಣೆಗಳಿಂದ ಮುಕ್ತಗೊಳಿಸಲು ಮೊದಲ ಸಂಘಟಿತ ಪ್ರಯತ್ನ ಮಾಡಿದ್ದರು. ಅದು ಬಹಿಷ್ಕೃತ ಹಿತಕಾರಿಣಿ ಸಭಾ ಎಂಬುದಾಗಿತ್ತು ಎಂದರು. ಅದರ ಎರಡನೇ ಸಮಾವೇಶ ನಿಪ್ಪಾಣಿಯಲ್ಲಿ ನಡೆದುದಾಗಿ ವಿವರಿಸಿದರು.

ಅವರು ಅಲ್ಲಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು ಎಂದರು. ಅಸ್ಪೃಶ್ಯರು, ದಲಿತರಿಗೆ ಶಿಕ್ಷಣ ಕೊಡಬೇಕು. ಆ ಶಿಕ್ಷಣ ಸಮರ್ಪಕವಾಗಿ ಸಿಗಲು ವಸತಿಶಾಲೆಗಳು, ವಸತಿನಿಲಯಗಳನ್ನು ಪ್ರಾರಂಭಿಸಬೇಕು ಎಂದಿದ್ದರು. ಆದರೆ, 100 ವರ್ಷ ಕಳೆದರೂ ನಮ್ಮ ರಾಜ್ಯದಲ್ಲಿ ಸುಮಾರು 200 ಹಾಸ್ಟೆಲ್, ವಸತಿ ಶಾಲೆಗಳು ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

11ರಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದ ಬಾಬಾಸಾಹೇಬರ ಪ್ರತಿಮೆ ಮುಂದಿನಿಂದ ರಥಯಾತ್ರೆ ಆರಂಭಿಸಿ ಸಂಜೆ ಚಿತ್ರದುರ್ಗ ತಲುಪುತ್ತೇವೆ. 12ರಂದು ಹುಬ್ಬಳ್ಳಿ, ಧಾರವಾಡ, 13ರ ಸಂಜೆ ಬೆಳಗಾವಿ, 14ರಂದು ಬಾಬಾಸಾಹೇಬರ ಜಯಂತಿಯಲ್ಲಿ ತೊಡಗಿಸಿಕೊಳ್ಳುತ್ತೇವೆ. 15ರಂದು ನಿಪ್ಪಾಣಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದೇವೆ ಎಂದು ತಿಳಿಸಿದರು.

1924ರಲ್ಲಿ ಮಹಾತ್ಮ ಗಾಂಧೀಜಿ ಅವರು ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನ ಮಾಡಿದ್ದಾರೆಂದು ತಿಳಿಸಿ ಆವತ್ತಿನ ಕಾಂಗ್ರೆಸ್ ಸರಕಾರವು 100 ವರ್ಷದ ಅಧಿವೇಶನ ಮಾಡಿತ್ತು. ಅದಕ್ಕೆ ಪೂರ್ವಭಾವಿಯಾಗಿ ಬೆಳಗಾವಿ ಅಧಿವೇಶನದಲ್ಲಿ ಶಾಸಕಿ ಶಶಿಕಲಾ ಜೊಲ್ಲೆಯವರು ಈ ವಿಷಯವನ್ನು ಪ್ರಸ್ತಾಪ ಮಾಡಿದ್ದರು. ಗಾಂಧೀಜಿ ಬಂದು 100 ವರ್ಷಗಳ ಆಚರಣೆ ನಡೆಸುತ್ತಿದ್ದೀರಿ. ಅಂಬೇಡ್ಕರ್ ಅವರು ಬಂದು 100 ವರ್ಷವಾಗಿದೆ. ಅದನ್ನೂ ಆಚರಿಸಿ ಎಂದು ಸರಕಾರಕ್ಕೆ ಸಲಹೆ ಕೊಟ್ಟಿದ್ದರು. ಆದರೆ, ಸರಕಾರವು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಆಕ್ಷೇಪಿಸಿದರು.

ಬಿಜೆಪಿಯು ಬಾಬಾಸಾಹೇಬ ಅಂಬೇಡ್ಕರರಿಗೆ ಎಲ್ಲೆಲ್ಲಿ ಅಪಮಾನ ಆಗಿದೆಯೋ, ಎಲ್ಲೆಲ್ಲಿ ತೊಂದರೆ ಆಗಿದೆಯೋ ಆ ಎಲ್ಲ ಸ್ಥಳಗಳಲ್ಲಿ ಅವರಿಗೆ ಸನ್ಮಾನ ಮಾಡುವ ಅಥವಾ ಗೌರವಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಏ. 11 ಐತಿಹಾಸಿಕ ದಿನ ಎಂದು ಬಿಜೆಪಿ ಪರಿಭಾವಿಸುತ್ತದೆ ಎಂದು ತಿಳಿಸಿದರು.

ಇದು ಸಾಂಕೇತಿಕ ಕಾರ್ಯಕ್ರಮವಲ್ಲ; ಅರ್ಥಪೂರ್ಣವಾಗಿ ನಡೆಯಲಿದೆ. ಬಾಬಾಸಾಹೇಬರ ಹೋರಾಟ, ಅವರ ಸಾಧನೆಗಳು, ಅವರಿಗೆ ಅಂದಿನ ಕಾಂಗ್ರೆಸ್ ಮಾಡಿದ ಮೋಸ, ಇಂದಿನ ಕಾಂಗ್ರೆಸ್ ಮಾಡುತ್ತಿರುವ ಮೋಸವನ್ನು ಜನಮಾನಸಕ್ಕೆ ತಲುಪಿಸಲಿದ್ದೇವೆ. ಏ. 14ರಂದು ಬಾಬಾಸಾಹೇಬರ ಜನ್ಮ ದಿನಾಚರಣೆ ಬರಲಿದೆ. ಅದನ್ನು ಸೇರಿಸಿಕೊಂಡು ನಾವು ಈ ಕಾರ್ಯಕ್ರಮ ಮಾಡುತ್ತೇವೆ ಎಂದು ವಿವರಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಮುಖಂಡರಾದ ಹೆಚ್. ಅನಿಲ್ ಕುಮಾರ್, ರಾಜ್ಯ ವಕ್ತಾರ ವೆಂಕಟೇಶ್ ದೊಡ್ಡೇರಿ, ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ರಾಜ್ಯ ಸಹ-ಸಂಚಾಲಕ ಹೆಚ್.ಎ. ಆತ್ಮಾನಂದ ಅವರು ಉಪಸ್ಥಿತರಿದ್ದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please लॉगिन