Congressmen are fighting against the Centre to change the direction of the Janakrosha Yatra: Vijayendra


16-04-2025
Press Release

Download Document

16-4-2025

 

ಪ್ರಕಟಣೆಯ ಕೃಪೆಗಾಗಿ

 

ಜನಾಕ್ರೋಶ ಯಾತ್ರೆ ದಿಕ್ಕು ಬದಲಿಸಲು ಕಾಂಗ್ರೆಸ್ಸಿನವರಿಂದ ಕೇಂದ್ರದ ವಿರುದ್ಧ ಹೋರಾಟ: ವಿಜಯೇಂದ್ರ

ಬೆಳಗಾವಿ:  ನಮ್ಮ ಜನಾಕ್ರೋಶ ಯಾತ್ರೆಯ ದಿಕ್ಕು ಬದಲಿಸಲು ಕಾಂಗ್ರೆಸ್ಸಿನವರು ನಾಳೆ ಕೇಂದ್ರ ಸರಕಾರದ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ 3 ಹಂತದಲ್ಲಿ ಜನಾಕ್ರೋಶ ಯಾತ್ರೆಯನ್ನು ಹಮ್ಮಿಕೊಂಡಿದೆ. ಮೊದಲ ಹಂತದ ಯಾತ್ರೆಯು ಮೈಸೂರಿನಿಂದ ಪ್ರಾರಂಭವಾಗಿ ಮಂಡ್ಯ, ಹಾಸನ, ಮಡಿಕೇರಿ, ಮಂಗಳೂರು, ಉಡುಪಿ, ಚಿಕ್ಕಮಗಳೂರು ಉತ್ತರ ಕನ್ನಡ, ನಿಪ್ಪಾಣಿ ಮೂಲಕ ಇವತ್ತು ಬೆಳಗಾವಿಯಲ್ಲಿ ಜನಾಕ್ರೋಶ ಯಾತ್ರೆ ಪ್ರಾರಂಭವಾಗಿದೆ. ಮೊದಲ ಹಂತದ ಜನಾಕ್ರೋಶ ಯಾತ್ರೆ ಪರಿಣಾಮವಾಗಿ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳು ತಲೆ ಕೆಡಿಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಿದರು.

ಬೆಂಗಳೂರಿಗೇ ಸೀಮಿತವಾದ ಸರಕಾರ..

ಗ್ಯಾರಂಟಿಗಳನ್ನು ನೀಡಿದ್ದು, ಜನರು ಸಂತೋಷ, ನೆಮ್ಮದಿಯಿಂದಿದ್ದಾರೆ ಎಂಬ ಭ್ರಮೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಇದ್ದರು. ಸರಕಾರ ಬಂದಾಗಿನಿಂದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ಸಚಿವಸಂಪುಟದ ಸದಸ್ಯರು ಬೆಂಗಳೂರಿಗೇ, ಎ.ಸಿ. ರೂಮಿಗೇ ಸೀಮಿತವಾಗಿದ್ದಾರೆ. ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳನ್ನು ಎಳೆಎಳೆಯಾಗಿ ನಾಡಿನ ಜನರ ಮುಂದೆ ಬಿಚ್ಚಿಡುವ ಕೆಲಸ ಮಾಡುತ್ತಿದ್ದೇವೆ. ಬೆಲೆ ಏರಿಕೆಯ ದುಬಾರಿ ಸರಕಾರದ ಪರಿಣಾಮವಾಗಿ ನಾಡಿನ ಜನರು ತತ್ತರಿಸಿದ್ದಾರೆ; ಬೇಸರ ಪಡುತ್ತಿದ್ದು, ಆಕ್ರೋಶ ಭರಿತರಾಗಿದ್ದಾರೆ. ನಮ್ಮ ಹೋರಾಟದ ಪರಿಣಾಮ ಮುಖ್ಯಮಂತ್ರಿಗಳಿಗೂ ತಟ್ಟಿದೆ. ಈಗ ಅವರಿಗೆ ಜ್ಞಾನೋದಯ ಆಗುತ್ತಿದೆ ಎಂದು ವಿಜಯೇಂದ್ರ ಅವರು ಟೀಕಿಸಿದರು.

ಮುಖ್ಯಮಂತ್ರಿಗಳು ಮತ್ತು ಸಚಿವರು ಹಳ್ಳಿಗಳಿಗೆ ತೆರಳಿ ಬೆಲೆ ಏರಿಕೆಯಿಂದ ಪರದಾಡುತ್ತಿರುವ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು ಎಂದು ಆಗ್ರಹಿಸಿದರು.

                ಪ್ರಶ್ನೆಗೆ ಉತ್ತರಿಸಿದ ಅವರು, ಗ್ಯಾರಂಟಿಗಳಿಂದ ರಾಜ್ಯ ಸಮೃದ್ಧವಾಗಿದೆ ಎಂಬ ಭ್ರಮೆ ಮುಖ್ಯಮಂತ್ರಿಗಳದು. ನಮ್ಮೆಲ್ಲ ಶಾಸಕರು ಮುಖ್ಯಮಂತ್ರಿಗಳ ಬಳಿ ಹೋಗಿ ಅನುದಾನ ಕೇಳಿದಾಗ ಗ್ಯಾರಂಟಿ ಕೊಟ್ಟಿದ್ದೀವಲ್ಲಾ ಎಂದಿದ್ದರು. ಸಿದ್ದರಾಮಯ್ಯನವರ ಸರಕಾರ ಬಂದ ಬಳಿಕ ಡೀಸೆಲ್ ಬೆಲೆ ಐದೂವರೆ ರೂ. ಹೆಚ್ಚಾಗಿದೆ. ಪೆಟ್ರೋಲ್ ಬೆಲೆ 3 ರೂ. ಏರಿಸಿದ್ದಾರೆ. ಇವನ್ನು ಜನಪರ ಮುಖ್ಯಮಂತ್ರಿಗಳು, ಸರಕಾರ ಮಾಡಲು ಸಾಧ್ಯವೇ? ಹಾಲಿನ ದರ 9 ರೂ. ಏರಿಸಿದ್ದಾರೆ. ಇದು ಬಡವರ ಪರ ನಿರ್ಧಾರವೇ? ಎಂದು ಕೇಳಿದರು. 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಮೇಲೆ ದರ ಏರಿಸಿದ್ದಾರೆ. ಕಾಂಟ್ರಾಕ್ಟರ್‍ಗಳು, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಡೀ ದೇಶದಲ್ಲಿ ಕೇವಲ 20 ತಿಂಗಳಲ್ಲೇ ತನ್ನ ಜನಪ್ರಿಯತೆ ಕಳಕೊಂಡ ರಾಜ್ಯ ಸರಕಾರ- ಮುಖ್ಯಮಂತ್ರಿಗಳು ಇದ್ದರೆ ಅದು ನಮ್ಮ ರಾಜ್ಯದ ಕಾಂಗ್ರೆಸ್ ಸರಕಾರ ಮತ್ತು ಸಿದ್ದರಾಮಯ್ಯನವರು ಎಂದು ವಿಶ್ಲೇಷಿಸಿದರು.

                ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದ ಅವರು, ಜಾರಿ ನಿರ್ದೇಶನಾಲಯವು (ಇ.ಡಿ) ನ್ಯಾಷನಲ್ ಹೆರಾಲ್ಡ್ ಕೇಸಿನ ಸಮಗ್ರ ತನಿಖೆ ನಡೆಸಿ ಸೋನಿಯಾ ಗಾಂಧಿಯವರು ಮೊದಲನೇ ಆರೋಪಿ, ರಾಹುಲ್ ಗಾಂಧಿಯವರು ಎರಡನೇ ಆರೋಪಿ ಎಂದಿದೆ. ಏನು ಮಾಡಿದ್ದಾರೋ ಅದನ್ನು ಅನುಭವಿಸಲೇಬೇಕಾಗುತ್ತಿದೆ ಎಂದು ತಿಳಿಸಿದರು. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ; ಅದನ್ನು ಎದುರಿಸಬೇಕಾಗುತ್ತದೆ ಎಂದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please लॉगिन