CM confined to state capital Bangalore : B. Y Vijayendra


22-04-2025
Press Release

Download Document

22-4-2025

 

ಪ್ರಕಟಣೆಯ ಕೃಪೆಗಾಗಿ

 

ರಾಜ್ಯದ ರಾಜಧಾನಿ ಬೆಂಗಳೂರಿಗೇ ಸೀಮಿತವಾದ ಸಿಎಂ

ವಿದ್ಯುತ್ ಸರಿಯಾಗಿ ಇಲ್ಲದೆ ರೈತ ಬೆಳೆದ ಬೆಳೆ ಕೈಗೆ ಬರುತ್ತಿಲ್ಲ - ಬಿ.ವೈ.ವಿಜಯೇಂದ್ರ

ಕೊಪ್ಪಳ: ಈ ರಾಜ್ಯದ ದೊರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇವಲ ಬೆಂಗಳೂರಿಗೇ ಸೀಮಿತರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಇಂದು ಇಲ್ಲಿ ಜನಾಕ್ರೋಶ ಯಾತ್ರೆ ಸಂಬಂಧ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಮಹಾರಾಜರು ಜನರ ಸುಖ, ನೆಮ್ಮದಿ, ಕಷ್ಟಗಳನ್ನು ತಿಳಿದುಕೊಳ್ಳಲು ರಾಜ್ಯವನ್ನು ಮಾರುವೇಷದಲ್ಲಿ ಸುತ್ತಾಡುತ್ತಿದ್ದರು. ಮುಖ್ಯಮಂತ್ರಿಗಳಿಗೆ ಕೊಪ್ಪಳ ಎಲ್ಲಿದೆ ಎಂದು ಗೊತ್ತಿಲ್ಲ. ಗುಲ್ಬರ್ಗ ಎಲ್ಲಿದೆ ಎಂದು ಗೊತ್ತಿಲ್ಲ ಎಂದು ವ್ಯಂಗ್ಯವಾಗಿ ನುಡಿದರು. ಮುಖ್ಯಮಂತ್ರಿ ಮತ್ತು ಅವರ ಮಂತ್ರಿಮಂಡಲದ ಸಚಿವರು ಕೇವಲ ಬೆಂಗಳೂರಿಗೇ ಸೀಮಿತರಾಗಿದ್ದಾರೆ ಎಂದು ಆಕ್ಷೇಪಿಸಿದರು.

ಜನಾಕ್ರೋಶ ಯಾತ್ರೆ ಆರಂಭಿಸಿದ ಬಳಿಕ ಈಗ ಅವರಿಗೆ ಚುಚ್ಚಿದಂತೆ ಆಗುತ್ತಿದೆ. ಈಗ ಬೆಳಗಾವಿ, ಇತರ ಕಡೆ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಚುನಾವಣೆ ಇಲ್ಲದಿದ್ದರೂ ಜನಾಕ್ರೋಶ ಯಾತ್ರೆ ಮಾಡುವುದಕ್ಕೆ 3 ಕಾರಣಗಳಿವೆ ಎಂದು ವಿವರಿಸಿದರು.

ರಾಜ್ಯದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಸಿದೆ. ಪೆಟ್ರೋಲ್, ಡೀಸೆಲ್ ದರ ಏರಿಸಿದ್ದಾರೆ. ಹಾಲಿನ ದರವನ್ನು 9 ರೂ. ಹೆಚ್ಚಿಸಿದ್ದಾರೆ. ಸ್ಟಾಂಪ್ ಡ್ಯೂಟಿ ಜಾಸ್ತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ರೈತರ ಪರವಾಗಿ ಮೊಸಳೆಕಣ್ಣೀರು ಹಾಕುವ ಸಿದ್ದರಾಮಯ್ಯ

ಬಡವರು ಆಸ್ಪತ್ರೆಗೆ ಹೋದರೆ ರಕ್ತ ಪರೀಕ್ಷೆ ಮಾಡಿಸಲು 3ರಿಂದ 4 ಪಟ್ಟು ದರ ಕೊಡಬೇಕಾಗಿದೆ. ಇದಿಷ್ಟೇ ಅಲ್ಲ; ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತರು ಹೊಲಕ್ಕೆ ವಿದ್ಯುತ್ ಸಂಪರ್ಕ ಪಡೆಯಲು 25 ಸಾವಿರ ಕಟ್ಟಿದರೆ ಸಾಕಿತ್ತು. ರೈತರ ಪರವಾಗಿ ಮೊಸಳೆಕಣ್ಣೀರು ಹಾಕುವ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದ ಬಳಿಕ 25 ಸಾವಿರದ ಬದಲಾಗಿ 2.5 ಲಕ್ಷದಿಂದ 3 ಲಕ್ಷ ಕಟ್ಟಬೇಕಾಗಿದೆ ಎಂದು ವಿಜಯೇಂದ್ರ ಅವರು ಆಕ್ಷೇಪಿಸಿದರು.

ರೈತರು ಬೆಳೆಗೆ ನೀರು ಹಾಯಿಸಿಕೊಳ್ಳಲು ವಿದ್ಯುತ್ ಕಣ್ಣಾಮುಚ್ಚಾಲೆಯದೇ ಸಮಸ್ಯೆ. ರೈತರು ನೀರು ಹಾಯಿಸಲು ಭಿಕ್ಷುಕರ ಥರ, ಕಳ್ಳರಂತೆ ರಾತ್ರಿ 10, 11 ಗಂಟೆಗೆ ಹೊಲದಲ್ಲಿ ಕಾಯಬೇಕಿದೆ ಎಂದು ಟೀಕಿಸಿದರು. ಇದರ ಪರಿಣಾಮವಾಗಿ ರೈತ ಬೆಳೆದ ಬೆಳೆ ಕೈಗೆ ಬರುತ್ತಿಲ್ಲ; ಇದು ವಾಸ್ತವಿಕ ಸತ್ಯ ಎಂದು ಬೇಸರ ವ್ಯಕ್ತಪಡಿಸಿದರು.

ಭತ್ತ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿದ್ದ ಯಡಿಯೂರಪ್ಪ, ಬಿಜೆಪಿ

ಭತ್ತ ಬೆಳೆಯುವ ಗಂಗಾವತಿಯಲ್ಲಿ 2010ರಲ್ಲಿ ಅಕಾಲಿಕ ಮಳೆಯಿಂದ ಭತ್ತ ಸಂಪೂರ್ಣ ನಾಶವಾಗಿತ್ತು. ಯಡಿಯೂರಪ್ಪ ಅವರು ನಿಮ್ಮ ಥರ ಕೈಕಟ್ಟಿ ಕೂರಲಿಲ್ಲ ಸಿದ್ದರಾಮಯ್ಯನವರೇ ಎಂದು ವಿಜಯೇಂದ್ರ ಅವರು ಗಮನ ಸೆಳೆದರು.

ತಕ್ಷಣವೇ ಯಡಿಯೂರಪ್ಪನವರು ಸಂಬಂಧಿತ ಸಚಿವರನ್ನು ಕೊಪ್ಪಳಕ್ಕೆ ಕಳುಹಿಸಿದರು. ಗಂಗಾವತಿಗೆ ಹೋಗಲು ಹೇಳಿದರು. ನಷ್ಟದ ಸರ್ವೇ ಮಾಡಿ ಪರಿಹಾರ ಕೊಡುವ ಕಾರ್ಯವನ್ನು ಬಿಜೆಪಿ ಸರಕಾರ ಮಾಡಿತ್ತು ಎಂದು ವಿವರಿಸಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತಿ ಮತ್ತು ಸಂಸದ ಗೋವಿಂದ ಕಾರಜೋಳ,  ಮಾಜಿ ಸಚಿವ ಬಿ. ಶ್ರೀರಾಮುಲು, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಮಾಜಿ ಸಚಿವ ಮತ್ತು ಶಾಸಕ ಜಿ. ಜನಾರ್ಧನ ರೆಡ್ಡಿ, ವಿಧಾನಸಭೆಯ ಮುಖ್ಯ ಸಚೇತಕ ದೊಡ್ಡನಗೌಡ ಹೆಚ್. ಪಾಟೀಲ್, ಮಾಜಿ ಸಚಿವ ಹಾಲಪ್ಪ ಆಚಾರ್, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಶ್ರೀಮತಿ ಹೇಮಲತಾ ನಾಯಕ್, ಮಾಜಿ ಶಾಸಕ ಶ್ರೀ ಪರಣ್ಣ ಮುನವಳ್ಳಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಜಿಲ್ಲಾಧ್ಯಕ್ಷ ಬಸವರಾಜ್ ದಡೆಸಗೂರು, ಮುಖಂಡ ಡಾ. ಬಸವರಾಜ ಕ್ಯಾವಟರ್, ನಿಕಟಪೂರ್ವ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು ಭಾಗವಹಿಸಿದ್ದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please लॉगिन