
30-4-2025
ಪ್ರಕಟಣೆಯ ಕೃಪೆಗಾಗಿ
ಕಾಂಗ್ರೆಸ್ಸಿನ ವಿರುದ್ಧ ಜನಾಕ್ರೋಶ- ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ಇಡೀ ಭಾರತ ದೇಶದಲ್ಲಿ ಎಲ್ಲರೂ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ. ಜನಾಕ್ರೋಶ ಪ್ರಾರಂಭವಾಗಿದೆ ಎಂದು ವಿಧಾನಪರಿಷತ್ ವಿರೋದ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಇಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಈ ದೇಶದಿಂದ ಗಾಯಬ್ ಆಗುವುದು ಸತ್ಯ ಎಂಬುದನ್ನು ಕಾಂಗ್ರೆಸ್ಸಿಗರೇ ಹೇಳಿಕೊಂಡಿದ್ದಾರೆ ಎಂದು ವಿಶ್ಲೇಷಿಸಿದರು. ಅಷ್ಟು ತಾಕತ್ತಿದ್ದರೆ ಕಾಂಗ್ರೆಸ್‍ನವರು ಟ್ವೀಟನ್ನು ಯಾಕೆ ಅಳಿಸಿಹಾಕಿದ್ದಾರೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಅದಕ್ಕೆ ಭಯಭೀತರಾಗಿ ಅವರೇ ಹಾಕಿದ ಟ್ವೀಟ್ ಗಾಯಬ್ ಆಗಿದೆ ಎಂದು ನುಡಿದರು. ಇಂಥ ಹೇಡಿಗಳು ಕಾಂಗ್ರೆಸ್‍ನವರು ಎಂದು ಆರೋಪಿಸಿದರು.
ಭಾರತದ ಪ್ರಧಾನಮಂತ್ರಿಯವರನ್ನು ಅವಹೇಳನ ಮಾಡುವ ರೀತಿಯಲ್ಲಿ ಅವರ ಶಿರವನ್ನು ತೆಗೆದು ಗಾಯಬ್ (ನಾಪತ್ತೆ ಅಥವಾ ಮಾಯ) ಎಂದು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ಸಿನವರಿಗೆ ತಲೆ ಇಲ್ಲ ಎಂದು ಅವರು ತೋರಿಸಿಕೊಂಡಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ಸಿನವರು ಭಾರತ ದೇಶಕ್ಕಿಂತ ಪಾಕಿಸ್ತಾನದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಇನ್ನು ಮುಂದೆ ಅವರು ಪಾಕಿಸ್ತಾನದಲ್ಲಿ ಚುನಾವಣೆಗೆ ನಿಲ್ಲುವುದನ್ನು ಯೋಚಿಸಬೇಕಿದೆ ಎಂದು ವ್ಯಂಗ್ಯವಾಡಿದರು.
ತಲೆ ಇಲ್ಲದ ಕಾಂಗ್ರೆಸ್ಸಿನವರು ಇದಕ್ಕಿಂತ ಒಳ್ಳೆಯದನ್ನು ಏನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು. ಕೆಲವರಿಗೆ ತಲೆ ಇಲ್ಲ; ಕೆಲವರಿಗೆ ತಲೆ ಇದೆ; ಆದರೆ ಮಿದುಳೇ ಇಲ್ಲ. ಕೆಲವರಿಗೆ ಮಿದುಳಿದೆ; ನಾಲಿಗೆಗೂ ಮಿದುಳಿಗೂ ಸಂಬಂಧವೇ ಇಲ್ಲ; ತಲೆ ಕೆಟ್ಟವರಂತೆ ಏನೆಲ್ಲ ಮಾತನಾಡುತ್ತಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯನವರು ಪಾಕಿಸ್ತಾನದಲ್ಲೆಲ್ಲೋ ಜಾಗ ಹುಡುಕುತ್ತಿರಬೇಕು. ಮುಡಾ ಸೈಟ್ ಸಾಕಾಗದೆ ಅವರು ಪಾಕಿಸ್ತಾನದಲ್ಲಿ ಸೈಟ್ ಹುಡುಕಿ ಹೋಗಬಹುದು ಎಂದು ಟೀಕಿಸಿದರು. ಸಿದ್ದರಾಮಯ್ಯನವರ ನಾಲಿಗೆ ಹೊಲಸಾಗಿದೆ. ಏನು ಬೇಕಾದರೂ ಮಾತನಾಡುತ್ತಾರೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.
ಬೆಳಗಾವಿಯಲ್ಲಿ ಮಹಿಳಾ ಮೋರ್ಚಾದವರು ಕಪ್ಪು ಬಟ್ಟೆ ತೋರಿಸಿದ್ದಕ್ಕೆ ಸಿದ್ದರಾಮಯ್ಯನವರಿಗೆ ಸಿಟ್ಟು ಬಂತಲ್ಲವೇ? ಒಬ್ಬ ಪೊಲೀಸ್ ಅಧಿಕಾರಿಯನ್ನು ಕರೆದು ಕಪಾಳಮೋಕ್ಷ ಮಾಡಲು ಹೊರಟಿದ್ದರಲ್ಲವೇ? ಹಾಗಿದ್ದರೆ, ಭಯೋತ್ಪಾದಕರ ದಾಳಿಯಲ್ಲಿ 28 ಜನ ಭಾರತೀಯರು ಸತ್ತಾಗ ಅಷ್ಟು ಸಿಟ್ಟು ಯಾಕೆ ಬರಲಿಲ್ಲ ಎಂದು ಪ್ರಶ್ನಿಸಿದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
To Write Comment Please लॉगिन