
30-4-2025
ಪ್ರಕಟಣೆಯ ಕೃಪೆಗಾಗಿ
ಜಾತಿ ಗಣತಿ- ಡಾ.ಅಶ್ವತ್ಥನಾರಾಯಣ್ ಸ್ವಾಗತ
ಬೆಂಗಳೂರು: ಕೇಂದ್ರ ಸರಕಾರವು ಜನಗಣತಿ ಜೊತೆಗೆ ಜಾತಿ ಗಣತಿ ಮಾಡಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರಕಾರಕ್ಕೆ ಜಾತಿ ಗಣತಿ ಮಾಡಲು ಅಧಿಕಾರ ಇಲ್ಲದಿದ್ದರೂ ಸಾಮಾಜಿಕ ಮತ್ತು ಶೈಕ್ಷಣಿಕ ಸರ್ವೇ ಅಡಿಯಲ್ಲಿ ಜಾತಿ ಗಣತಿ ನಡೆದಿತ್ತು. ಆದರೆ, ಕರ್ನಾಟಕದಲ್ಲಿ ಈ ವಿಷಯದಲ್ಲಿ ಗೊಂದಲವಾಗಿತ್ತು. ಇದು ಸರಿಯಾಗಿ ಮಾಡಿಲ್ಲ; ಕಾನೂನುಬದ್ಧವಾಗಿ ಇಲ್ಲ; ಪ್ರತಿ ಮನೆಗೆ ಹೋಗಿಲ್ಲ ಹಾಗೂ ಎಲ್ಲ ಜಾತಿಯ ಗಣತಿ ಸರಿಯಾಗಿ ನಡೆದಿಲ್ಲ ಎಂಬ ಕೂಗು ಕೇಳಿಸಿತ್ತು ಎಂದು ಗಮನ ಸೆಳೆದರು.
ಕಾಂಗ್ರೆಸ್ ಸರಕಾರ ಈ ವಿಷಯದಲ್ಲಿ ಗೊಂದಲ ನಿರ್ಮಾಣ ಮಾಡಿತ್ತು. ಸಮಾಜದಲ್ಲಿ ಗೊಂದಲ, ಜಾತಿಗಳ ನಡುವೆ ಗೊಂದಲಕ್ಕೆ ಕಾರಣವಾಗಿತ್ತು. ಇದಕ್ಕೆಲ್ಲ ಅಂತ್ಯ ಕಾಣಿಸಲು ಮತ್ತು ತೆರೆ ಎಳೆಯಲು ಕೇಂದ್ರ ಸರಕಾರ ಸ್ಪಷ್ಟ, ವೈಜ್ಞಾನಿಕ ಹಾಗೂ ಕಾನೂನುಬದ್ಧ, ಅಧಿಕಾರದ ಭಾಗವಾಗಿ ಜಾತಿ ಗಣತಿಯನ್ನು ಮಾಡಲಿದೆ. ವ್ಯವಸ್ಥಿತವಾಗಿ ಇದು ನಡೆಯಲಿದೆ ಎಂದು ತಿಳಿಸಿದರು.
ಸಮಾಜದ ಎಲ್ಲರ ಸ್ಥಿತಿಗತಿ ಗೊತ್ತಾಗಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಜೆಪಿ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
To Write Comment Please लॉगिन