
9-5-2025
ಪ್ರಕಟಣೆಯ ಕೃಪೆಗಾಗಿ
ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ವಿಶ್ವಾಸ : ಕೋಟ ಶ್ರೀನಿವಾಸ್ ಪೂಜಾರಿ
ಬೆಂಗಳೂರು: ಭಾರತ ದೇಶಕ್ಕೆ ಯಾವುದೇ ಭಯೋತ್ಪಾದಕರು ತಲೆಹಾಕಬಾರದು ಎಂದು ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ನಮ್ಮ ರಕ್ಷಣಾ ಇಲಾಖೆ ಮಾಡುತ್ತದೆ ಎಂಬ ವಿಶ್ವಾಸವನ್ನು ದೇಶದ ಪ್ರತಿಯೊಬ್ಬ ಪ್ರಜೆಗಳು ಹೊಂದಿದ್ದಾರೆ ಎಂದು ಸಂಸದ ಮತ್ತು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಾಕಿಸ್ತಾನದ ಉಗ್ರಗಾಮಿಗಳನ್ನು ಮಟ್ಟಹಾಕಲು ಮತ್ತು ಪಾಕಿಸ್ತಾನಕ್ಕೆ ಕಟ್ಟೆಚ್ಚರ ನೀಡಲು ಭಾರತವು ಅಪರೇಷನ್ ಸಿಂದೂರ ನಡೆಸುತ್ತಿದೆ ಎಂದು ತಿಳಿಸಿದರು. ಭಾರತದ ಈಗಿನ ಪರಿಸ್ಥಿತಿಯಲ್ಲಿ ನಾವು ಯಾವುದೇ ಪಕ್ಷ, ಧರ್ಮ ಮೀರಿ ಒಟ್ಟಾಗಿ ಭಾರತದ ಸೇನಾ ಕಾರ್ಯಾಚರಣೆಗೆ ಬೆಂಬಲ ನೀಡಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು ಎಂದು ಅವರು ಮನವಿ ಮಾಡಿದರು.
3 ಕಾರಣಕ್ಕಾಗಿ ಎನ್‍ಐಎ ತನಿಖೆಗೆ ಆಗ್ರಹ
3 ಪ್ರಮುಖ ಕಾರಣಗಳಿಗಾಗಿ ಸುಹಾಸ್ ಶೆಟ್ಟಿ ಅವರ ಕೊಲೆ ಪ್ರಕರಣವನ್ನು ಎನ್‍ಐಎ ತನಿಖೆಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು. ಈ ಹತ್ಯೆಯ ಹಿಂದೆ ಕೇರಳ ರಾಜ್ಯ ಸೇರಿದಂತೆ ಇತರ ರಾಜ್ಯದ ಕೆಲವು ಮಂದಿ ಪಾತ್ರ ವಹಿಸಿದ್ದಾರೆ. ಈ ಹತ್ಯೆಗೆ ವಿದೇಶದಿಂದ ಹಣ ಹರಿದುಬಂದ ಮಾಹಿತಿ ಇದೆ. ಅಲ್ಲದೇ, ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿರುವ ಶಂಕೆ ಇದೆ. ಇವೆಲ್ಲ ವಿಚಾರಗಳನ್ನು ಮಾನ್ಯ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಎನ್‍ಐಎ ತನಿಖೆಗೆ ಕೋರಿದ್ದೇವೆ ಎಂದು ವಿವರಿಸಿದರು.
ಸುಹಾಸ್ ಶೆಟ್ಟಿ ಅವರ ತಂದೆ ಮತ್ತು ತಾಯಿಯವರೊಂದಿಗೆ ರಾಜ್ಯ ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ನಿಯೋಗವು ಘನತವೆತ್ತ ರಾಜ್ಯಪಾಲರನ್ನು ಭೇಟಿಯಾಗಿ ಸುಹಾಸ್ ಹತ್ಯೆಯ ಪ್ರಕರಣದ ತನಿಖೆಯನ್ನು ಎನ್‍ಐಎಗೆ ಒಪ್ಪಿಸಲು ಮನವಿ ಮಾಡಲಾಗಿದೆ ಎಂದರು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವಂತೆ ನಾವು ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
To Write Comment Please लॉगिन