Anti-people Congress government : Vijayendra


09-04-2025
Press Release

Download Document

9-4-2025

 

ಪ್ರಕಟಣೆಯ ಕೃಪೆಗಾಗಿ

 

ಜನವಿರೋಧಿ ಕಾಂಗ್ರೆಸ್ ಸರಕಾರ: ವಿಜಯೇಂದ್ರ

ಮಡಿಕೇರಿ: ಕಾಂಗ್ರೆಸ್ ಪಕ್ಷವು ಅಧಿಕಾರ ಬಂದ ಮೇಲೆ ತಾನು ಕೊಟ್ಟ ಎಲ್ಲ ಭರವಸೆಗಳನ್ನೂ ಮರೆತಿದೆ ಹಾಗೂ ಜನವಿರೋಧಿಯಾಗಿ ವರ್ತಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ  ಅವರು ಟೀಕಿಸಿದ್ದಾರೆ.

ಬಿಜೆಪಿ ಜನಾಕ್ರೋಶ ಯಾತ್ರೆಯ ಮೂರನೇ ದಿನವಾದ ಇಂದು ಇಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಚುನಾವಣೆ ಬಂದಾಗ ನೀರಾವರಿ ಕುರಿತ ಹೋರಾಟದ ನಾಟಕ ಮಾಡಿತ್ತು. ಕೃಷ್ಣೆಯ ಕಡೆಗೆ, ಮೇಕೆದಾಟು ಕಡೆಗೆ ಎಂದು ಎರಡು ಪಾದಯಾತ್ರೆ ಮಾಡಿದ್ದರು. ಅಹಿಂದ ಹೆಸರು ಹೇಳಿಕೊಂಡು ಮತ ಪಡೆದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಎಲ್ಲ ಹಿಂದುಳಿದ ಸಮುದಾಯಗಳನ್ನು ಮರೆತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 100ಕ್ಕೂ ಹೆಚ್ಚು ಹಿಂದುಳಿದ ಸಮಾಜಗಳಿದ್ದು, ಕಾಂಗ್ರೆಸ್ಸಿನವರು ಅವರನ್ನು ಮರೆತು ಕೇವಲ ಅಲ್ಪಸಂಖ್ಯಾತರ ಹಿಂದೆ, ಮುಸ್ಲಿಮರ ಪರವಾಗಿ ಹೊರಟಿದ್ದಾರೆ ಎಂದು ದೂರಿದರು. ಆದರೆ, ಚುನಾವಣೆ ಇಲ್ಲದಿದ್ದರೂ ಬಿಜೆಪಿ ಜನಪರ ಹೋರಾಟಕ್ಕೆ ಇಳಿದಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು 20 ತಿಂಗಳಾಗಿದೆ. 50 ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಇದರ ಪರಿಣಾಮವಾಗಿ ಈ ಹಿಂದೆ ಮತ ಕೊಟ್ಟಿದ್ದ ರಾಜ್ಯದ ಜನರು ಸಿದ್ದರಾಮಯ್ಯನವರಿಗೆ ಮತ್ತು ಕಾಂಗ್ರೆಸ್ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ತಿಳಿಸಿದರು.

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿದರು. ಹಾಲಿನ ದರ ಏರಿಸಿದರು. ಸಿದ್ದರಾಮಯ್ಯನವರ ಸರಕಾರ ಕೇವಲ 20 ತಿಂಗಳಿನಲ್ಲಿ 3 ಬಾರಿ ಹಾಲಿನ ದರ ಏರಿಸಿ ನೀಚತನ ತೋರಿದೆ ಎಂದು ಆರೋಪಿಸಿದರು. 9 ರೂ. ಜಾಸ್ತಿ ಮಾಡಿದ್ದಾರೆ. ಬಡವರು ಮಕ್ಕಳಿಗೆ ಪೌಷ್ಟಿಕ ಆಹಾರವಾಗಿ ಹಾಲು ನೀಡಲು 9 ರೂ. ಹೆಚ್ಚುವರಿ ಖರ್ಚು ಮಾಡಬೇಕಾಗಿದೆ ಎಂದು ಟೀಕಿಸಿದರು.

ಕೇಂದ್ರ ಸರಕಾರವು ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಸಿದರೂ ಅದರ ಹೊರೆಯನ್ನು ಜನರ ಮೇಲೆ ಹಾಕಿಲ್ಲ. ಗ್ಯಾಸ್ ಬೆಲೆ 50 ರೂ. ಹೆಚ್ಚಿಸಿದ್ದಾಗಿ ಸಿದ್ದರಾಮಯ್ಯನವರು ಟೀಕಿಸಿದ್ದಾರೆ. ಅವರು ಅರ್ಧ ಸತ್ಯ ಹೇಳುತ್ತಿದ್ದಾರೆ. 2023ರ ಮಾರ್ಚ್‍ನಲ್ಲಿ ಸಿಲಿಂಡರ್ ದರ 1107 ರೂ. ಇತ್ತು. ಇವತ್ತು 50 ರೂ. ಜಾಸ್ತಿ ಆದರೂ 850 ರೂ. ಇದೆ. ಮೋದಿ ಸರಕಾರವು 300 ರೂ. ದರ ಕಡಿಮೆ ಮಾಡಿದೆ ಎಂದು ಗಮನ ಸೆಳೆದರು.

ಹಾಲಿನ ಬೆಲೆ 9 ರೂ. ಹೆಚ್ಚಿಸಿದ್ದೀರಲ್ಲವೇ? ಯಾವ ಅಂತರರಾಷ್ಟ್ರೀಯ ಬೆಲೆ ಜಾಸ್ತಿ ಆಗಿತ್ತು ಎಂದು ಪ್ರಶ್ನಿಸಿದರು. ಸರಕಾರಿ ಕಾಮಗಾರಿಗಳಲ್ಲಿ ಮುಸಲ್ಮಾನರಿಗೆ ಶೇ 4ರಷ್ಟು ಮೀಸಲಾತಿ ನೀಡಿದ ಸಂವಿಧಾನವಿರೋಧಿ ಕ್ರಮ, ಅಹಿಂದ ಹೆಸರು ಹೇಳಿಕೊಂಡು ಅಧಿಕಾರ ಪಡೆದ ಕಾಂಗ್ರೆಸ್ಸಿಗರು, ಸಿದ್ದರಾಮಯ್ಯನವರು, ಪರಿಶಿಷ್ಟ ಜಾತಿ, ಪಂಗಡಗಳ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟ 38,500 ಕೋಟಿ ರೂಪಾಯಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದನ್ನು ಅವರು ಜನರ ಗಮನಕ್ಕೆ ತಂದರು. ಅಲ್ಲದೆ ಇದು ಖಂಡನೀಯ ಎಂದು ತಿಳಿಸಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಸಚಿವ ಬಿ. ಶ್ರೀರಾಮುಲು, ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಸಂಸದ ಯದುವೀರ್ ಒಡೆಯರ್, ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್, ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಕೊಡಗು ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ, ವಿಭಾಗ ಪ್ರಭಾರಿ ಉದಯ್‍ಕುಮಾರ್ ಶೆಟ್ಟಿ, ರಾಜೇಶ್ ಕಾವೇರಿ, ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಭಾರತೀಶ್, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login