
2-5-2025
ಪ್ರಕಟಣೆಯ ಕೃಪೆಗಾಗಿ
ಸಿದ್ದರಾಮಯ್ಯನವರು ರಾಹುಲ್ ಗಾಂಧಿಯವರನ್ನು ಪ್ರಶ್ನಿಸಲು ಒತ್ತಾಯ
ಜಾತಿಗಣತಿ ಮಾಡಬೇಕೆಂದು ಕಾಂಗ್ರೆಸ್ಸಿನವರಿಗೆ ಯಾಕೆ ಬುದ್ಧಿ ಬರಲಿಲ್ಲ: ಪಿ.ಸಿ.ಮೋಹನ್
ಬೆಂಗಳೂರು: ರಾಹುಲ್ ಗಾಂಧಿಯವರು ಹೇಳಿದ್ದಕ್ಕೆ ಒತ್ತಡದಿಂದ ನರೇಂದ್ರ ಮೋದಿಯವರು ಜಾತಿಗಣತಿ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. 60 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ಸಿನವರಿಗೆ ಜಾತಿಗಣತಿ ಮಾಡಬೇಕೆಂದು ಯಾಕೆ ಬುದ್ಧಿ ಬರಲಿಲ್ಲ ಎಂದು ಸಂಸದ ಪಿ.ಸಿ.ಮೋಹನ್ ಅವರು ಪ್ರಶ್ನಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, 2013ರಲ್ಲಿ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಮಾಡಿದ ಕ್ಯಾಬಿನೆಟ್ ನಿರ್ಣಯವನ್ನು ರಾಹುಲ್ ಗಾಂಧಿಯವರು ಹರಿದುಹಾಕಿದ್ದರು. ಇದು ನಾನ್‍ಸೆನ್ಸ್ ಎಂದಿದ್ದರು. 2004ರಿಂದ 2014ರವರೆಗೆ ಇದೇ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದರು. ಇದೇ ರಾಹುಲ್ ಗಾಂಧಿಯವರು ಯಾಕೆ ಜಾತಿಗಣತಿ ಮಾಡಿಸಲಿಲ್ಲ ಎಂದು ಸಿದ್ದರಾಮಯ್ಯನವರು ರಾಹುಲ್ ಗಾಂಧಿಯವರನ್ನು ಪ್ರಶ್ನಿಸಬೇಕು ಎಂದು ಆಗ್ರಹಿಸಿದರು.
ದಿಕ್ಕು ತಪ್ಪಿಸುವ ಕೆಲಸ ಮಾಡುವ ಮುಖ್ಯಮಂತ್ರಿಗಳು..
ಶೇ 50ಕ್ಕಿಂತ ಹೆಚ್ಚು ಮೀಸಲಾತಿ ಕೊಡಲಾಗುವುದಿಲ್ಲ ಎಂಬುದು ತಿಳಿದಿದ್ದರೂ ಶೇ 50ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮೀಸಲಾತಿ ಕೊಡುವಂತೆ ಸಿದ್ದರಾಮಯ್ಯನವರು ಹೇಳಿದ್ದಾರೆ. ಈ ವಿಷಯದಲ್ಲಿ ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಸಿದ್ದರಾಮಯ್ಯನವರದು ಎಂದು ಟೀಕಿಸಿದರು. ಸಿದ್ದರಾಮಯ್ಯನವರು ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಪಿ.ಸಿ.ಮೋಹನ್ ಅವರು ಆಕ್ಷೇಪಿಸಿದರು. ಶೇ 50ಕ್ಕಿಂತ ಹೆಚ್ಚು ಮೀಸಲಾತಿ ಇರಬಾರದೆಂದು ಸುಪ್ರೀಂ ಕೋರ್ಟ್ ತಿಳಿಸಿದ್ದನ್ನು ಉಲ್ಲೇಖಿಸಿದರು.
ಸಚಿವ ಮುನಿಯಪ್ಪ ಅವರು ಮಾತನಾಡುವ ವೇಳೆ ರಾಜ್ಯದಲ್ಲಿ ಖರ್ಗೆಯವರು ಮುಖ್ಯಮಂತ್ರಿ ಆಗಬೇಕಿತ್ತು ಎಂದಿದ್ದಾರೆ. ಖರ್ಗೆಯವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷವು ಯಾವತ್ತೂ ದಲಿತರಿಗೆ ಮೋಸ ಮಾಡಿದೆ ಎಂದು ಮುನಿಯಪ್ಪ ಅವರಿಗೆ ತಿಳಿಸಲು ಬಯಸುವುದಾಗಿ ಹೇಳಿದರು. 8 ಬಾರಿ ಸಂಸದರಾಗಿದ್ದ ಜಗಜೀವನರಾಂ ಅವರು ಪ್ರಧಾನಿ ಆಗುವುದು ತಪ್ಪಿತ್ತು ಎಂದೂ ಹೇಳಿದ್ದಾರೆ. ಜಗಜೀವನರಾಂ ಅವರು 7 ಬಾರಿ ಸಂಸದರಾದುದು ಕಾಂಗ್ರೆಸ್ಸಿನಲ್ಲಿ; ಕಾಂಗ್ರೆಸ್ಸಿನವರೇ ಅವರನ್ನು ಪ್ರಧಾನಿ ಮಾಡಬಹುದಿತ್ತು. ಕಾಂಗ್ರೆಸ್ಸಿನವರು ಅವರಿಗೆ ಮೋಸ ಮಾಡಿದ್ದಾರೆ ಎಂದು ತಿಳಿಸಿದರು.
550 ಕೋಟಿ ಹಣ ಸಾಕಾಗದು ಎಂದು ಖರ್ಗೆಯವರು ಹೇಳಿದ್ದಾರೆ. ಆದರೆ, ನಮ್ಮ ಸರಕಾರ ಜಾತಿಗಣತಿ ವಿಚಾರದಲ್ಲಿ ಬದ್ಧವಾಗಿದೆ. ಹೆಚ್ಚುವರಿ ಮೊತ್ತ ಬೇಕಾದಾಗ ಸರಕಾರವು ಅದನ್ನು ಒದಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರಕಾರವು ಮೊನ್ನೆ ಜಾತಿ ಗಣತಿ ಜೊತೆಗೇ ಜಾತಿ ಗಣತಿ ಮಾಡಲು ನಿರ್ಧಾರ ಮಾಡಿರುವುದು ಸ್ವಾಗತಾರ್ಹ ಎಂದು ಹೇಳಿದರು. ಬ್ರಿಟಿಷರ ಆಡಳಿತದಲ್ಲಿ 1931ರಲ್ಲಿ ಮೊದಲ ಬಾರಿಗೆ ಜಾತಿ ಗಣತಿ ನಡೆದಿತ್ತು. ಮೋದಿಜೀ ಅವರ ಸಚಿವಸಂಪುಟವು ಜಾತಿ ಗಣತಿ ಮಾಡಲು ನಿರ್ಣಯಿಸಿದ್ದು ದೇಶದ ಎಲ್ಲರಿಗೂ ಸಂತೋಷ ತಂದಿದೆ ಎಂದರು.
ಈ ದೇಶವನ್ನು 60 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷವು ಒಬಿಸಿ, ಎಸ್.ಸಿ, ಎಸ್‍ಟಿಗಳ ಜೊತೆ ನಾವಿದ್ದೇವೆ ಎನ್ನುತ್ತಲೇ ಬಂದಿತ್ತು. ಆದರೆ, ಇವತ್ತಿನವರೆಗೂ ಈ ಸಮುದಾಯಗಳಿಗೆ ನ್ಯಾಯ ಕೊಡುವುದರಲ್ಲಿ ವಿಫಲವಾಗಿದ್ದಾರೆ ಎಂದು ಟೀಕಿಸಿದರು.
ಮೋದಿಜೀ ಅವರ ಸರಕಾರದಲ್ಲಿ ಜಾತಿ ಗಣತಿ ನಡೆಯಲಿದ್ದು, ಜಾತಿವಾರು ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ಇದರಿಂದ ಎಸ್‍ಸಿ, ಎಸ್‍ಟಿ, ಹಿಂದುಳಿದ ವರ್ಗಗಳಲ್ಲಿ ಯಾರಿಗೆ ಸರಕಾರದ ಸೌಲಭ್ಯ ಸಿಕ್ಕಿಲ್ಲವೋ ಅದನ್ನು ಕೊಡಿಸುವ ಕೆಲಸ ನಡೆಯಲಿದೆ. ಯಾವ ಸಮಾಜದ ಸ್ಥಿತಿಗತಿ ಹೇಗಿದೆ ಎಂಬುದನ್ನು ಕೋರ್ಟ್ ಕೇಳುತ್ತದೆ. ತಳಮಟ್ಟದಲ್ಲಿ ಇರುವವರಿಗೆ ಈ ಸಮೀಕ್ಷೆಯಿಂದ ನೆರವು ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಯದುವೀರ್ ಒಡೆಯರ್, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಅಶ್ವಿನಿ ಶಂಕರ್ ಉಪಸ್ಥಿತರಿದ್ದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
To Write Comment Please Login