Good response to a Janakrosha Yatra in all districts : Vijayendra


22-04-2025
Press Release

Download Document

22-4-2025

 

ಪ್ರಕಟಣೆಯ ಕೃಪೆಗಾಗಿ

 

ಎಲ್ಲ ಜಿಲ್ಲೆಗಳಲ್ಲಿ ಜನಾಕ್ರೋಶ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ

ರಾಷ್ಟ್ರಗೌರವಕ್ಕೆ ಧಕ್ಕೆ ತಂದ ರಾಹುಲ್ ಗಾಂಧಿ: ವಿಜಯೇಂದ್ರ

ಗದಗ: ರಾಹುಲ್ ಗಾಂಧಿಯವರಿಗೆ ವಿದೇಶದಲ್ಲಿ ಭಾರತಕ್ಕೆ ಗೌರವಕ್ಕೆ ಧಕ್ಕೆ ಆಗದಂತೆ ನಡೆದುಕೊಳ್ಳುವ ಕನಿಷ್ಠ ಸೌಜನ್ಯವೂ ಇಲ್ಲದೆ ಇರುವುದು ದುರ್ದೈವ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ರಾಹುಲ್ ಗಾಂಧಿಯವರು ನಿನ್ನೆ ಅಮೆರಿಕದಲ್ಲಿ ಭಾರತಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಆ ಪುಣ್ಯಾತ್ಮ ರಾಹುಲ್ ಗಾಂಧಿಗೆ ಹೊರದೇಶಕ್ಕೆ ಹೋದಾಗ ದೇಶದ ಬಗ್ಗೆ ಹೇಗೆ ನಡೆದುಕೊಳ್ಳಬೇಕು ಎಂಬುದು ತಿಳಿದಿಲ್ಲ ಎಂದು ಆಕ್ಷೇಪಿಸಿದರು. ಅಲ್ಲಿ ನಿಂತು ಇಲ್ಲಿನ ಚುನಾವಣಾ ಪ್ರಕ್ರಿಯೆ ಬಗ್ಗೆ ಮಾತನಾಡಿದ್ದೂ ಅಲ್ಲದೆ, ಸಂವಿಧಾನಾತ್ಮಕ ಸಂಸ್ಥೆಯಾದ ಚುನಾವಣಾ ಆಯೋಗದ ಕುರಿತು ಟೀಕಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್ ಗೆದ್ದಾಗ ಒಂದು ಮಾನದಂಡ..

ರಾಹುಲ್ ಅವರಿಗೆ ಮಹಾರಾಷ್ಟ್ರದಲ್ಲಿ ಹಿನ್ನಡೆ ಆಗಿದ್ದರೆ ಸಂಸತ್ತಿನಲ್ಲಿ ಮಾತನಾಡಬಹುದಿತ್ತು. ಮಹಾರಾಷ್ಟ್ರದಲ್ಲಿ ಚುನಾವಣಾ ಆಯೋಗವು ಬಿಜೆಪಿಗೆ ಸಹಕರಿಸಿದ್ದರೆ, ಕಾಂಗ್ರೆಸ್ಸಿಗೆ ಮೋಸ ಆಗಿದ್ದರೆ, ಹಿಂದೆ ತೆಲಂಗಾಣ ರಾಜ್ಯದಲ್ಲೂ ಹಾಗೆ ಮಾಡಬಹುದಿತ್ತಲ್ಲವೇ? ಎಂದು ಬಿ.ವೈ.ವಿಜಯೇಂದ್ರ ಅವರು ಕೇಳಿದರು.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದೆ. ಅಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬಹುದಿತ್ತು. ತೆಲಂಗಾಣದಲ್ಲಿ ಗೆದ್ದಾಗ ಒಂದು ಮಾನದಂಡ. ಒಂದು ರೀತಿಯ ಹೇಳಿಕೆ ಕೊಡುತ್ತಾರೆ. ಮಹಾರಾಷ್ಟ್ರದಲ್ಲಿ ಸೋತಾಗ ಅನುಮಾನ ಆರಂಭವಾಗುತ್ತದೆ. ಅದನ್ನು ಅಮೆರಿಕದಲ್ಲಿ ಮಾತನಾಡುವುದು ಮೂರ್ಖತನದ ಪರಮಾವಧಿ ಎಂದು ತಿಳಿಸಿದರು. ವಿಪಕ್ಷ ನಾಯಕನ ಬೇಜವಾಬ್ದಾರಿಯ ನಡೆ ಇದು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಜನಾಕ್ರೋಶ ಯಾತ್ರೆಯು ಎರಡು ಹಂತಗಳನ್ನು ಮುಗಿಸಿದ್ದು, ಇಂದು ಗದಗದಿಂದ ಮತ್ತೆ ಆರಂಭವಾಗಲಿದೆ. ಎಲ್ಲ ಜಿಲ್ಲೆಗಳಲ್ಲಿ ಜನಾಕ್ರೋಶ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ  ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ದೊಡ್ಡ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಜನರು ಬೀದಿಗಿಳಿದು ಹೋರಾಡುತ್ತಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತ ಬರುತ್ತಿದೆ. ಬೆಲೆ ಏರಿಕೆಯ ಪರಿಣಾಮವಾಗಿ ಕರ್ನಾಟಕವು ಅತ್ಯಂತ ದುಬಾರಿ ರಾಜ್ಯ ಎನ್ನುವ ಸ್ಥಿತಿಗೆ ತಲುಪಿದೆ. ಭ್ರಷ್ಟಾಚಾರವು ಮಿತಿ ಮೀರಿ ಹೋಗಿದೆ. ವಾಲ್ಮೀಕಿ ನಿಗಮದಲ್ಲಿ ಹಗರಣ ಸಂಬಂಧ ಬಿಜೆಪಿ ಹೋರಾಟ ಕೈಗೆತ್ತಿಕೊಂಡ ಪರಿಣಾಮವಾಗಿ ಸಚಿವರೂ ರಾಜೀನಾಮೆ ಕೊಟ್ಟಿದ್ದರು ಎಂದು ನೆನಪಿಸಿದರು.

ಮೈಸೂರಿನ ಮುಡಾ ಹಗರಣದಲ್ಲಿ ನಾನು ತಪ್ಪೆಸಗಿಲ್ಲ; ತೇಜೋವಧೆ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡುತ್ತಿದ್ದರು. ಅದೇ ಸಿದ್ದರಾಮಯ್ಯನವರ ಕುಟುಂಬವು ಮುಖ್ಯಮಂತ್ರಿಗಳ ಅಂದಾಜು ಪ್ರಕಾರ 62 ಕೋಟಿ ಬೆಲೆಬಾಳುವ 14 ನಿವೇಶನಗಳನ್ನು ಯಾವುದೇ ಷರತ್ತಿಲ್ಲದೆ ವಾಪಸ್ ಮಾಡಿದ್ದಾರೆ. ಸಿದ್ದರಾಮಯ್ಯನವರು ಕ್ಲೀನ್ ರಾಜಕಾರಣಿ ಅಲ್ಲ; ಭ್ರಷ್ಟ ರಾಜಕಾರಣಿ ಎಂಬುದು ಇದರಿಂದ ಗೊತ್ತಾಗಿದೆ ಎಂದು ವಿಶ್ಲೇಷಿಸಿದರು. ಕಾಂಗ್ರೆಸ್ ಸರಕಾರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ಟೀಕಿಸಿದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login