Modiji will eliminate terrorists - Vijayendra


23-04-2025
Press Release

Download Document

23-4-2025

 

ಪ್ರಕಟಣೆಯ ಕೃಪೆಗಾಗಿ

 

ಪಾಕಿಸ್ತಾನದ ಕೈವಾಡದಿಂದ ಉಗ್ರರ ಅಟ್ಟಹಾಸ; ದಾಳಿಗೆ ಖಂಡನೆ

ಮೋದಿಜೀ ಉಗ್ರರನ್ನು ಮಟ್ಟ ಹಾಕಲಿದ್ದಾರೆ-ವಿಜಯೇಂದ್ರ

ರಾಯಚೂರು: ಜಮ್ಮು- ಕಾಶ್ಮೀರದಲ್ಲಿ ನಡೆದ ದುರ್ಘಟನೆ ಖಂಡನೀಯ. ನಾಳೆ, ನಾಡಿದ್ದು ನಡೆಯಬೇಕಾದ ಜನಾಕ್ರೋಶ ಯಾತ್ರೆಯನ್ನು ಮುಂದೂಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ‘ಜನಾಕ್ರೋಶ ಯಾತ್ರೆ’ ಸಂಬಂಧ ಇಂದು ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಉತ್ಸಾಹದಿಂದ ಕಾರ್ಯಕ್ರಮಕ್ಕೆ ಬಂದ ಜನರಿಗೆ ಕೃತಜ್ಞತೆ ಸಲ್ಲಿಸಿದರು. ಈ ದಾಳಿ ವೇಳೆ ಮೃತಪಟ್ಟ ಬೆಂಗಳೂರಿನ ಭರತ್ ಭೂಷಣ್ ಅವರ ಅಂತ್ಯಕ್ರಿಯೆಯಲ್ಲಿ ನಾಳೆ ನಾನು ಭಾಗವಹಿಸಲಿದ್ದೇನೆ ಎಂದು ತಿಳಿಸಿದರು.

ಉಗ್ರರು ಎಲ್ಲೇ ಅಡಗಿದ್ದರೂ, ಯಾವ ದೇಶದ ಕುಮ್ಮಕ್ಕು ಇದ್ದರೂ ಅದನ್ನು ಮಟ್ಟ ಹಾಕುವ ಶಕ್ತಿ ಭಾರತಕ್ಕಿದೆ. ದೇಶದಲ್ಲಿ ನರೇಂದ್ರ ಮೋದಿಜೀ ಅವರು ಪ್ರಧಾನಿಯಾಗಿದ್ದಾರೆ ಎಂಬುದೇ ಈ ವಿಶ್ವಾಸಕ್ಕೆ ಕಾರಣ ಎಂದು ತಿಳಿಸಿದರು. ಉಕ್ಕಿನ ಮನುಷ್ಯ ಎನಿಸಿದ ಗೃಹ ಸಚಿವ ಅಮಿತ್ ಶಾ ಜೀ ಜೊತೆಗಿದ್ದಾರೆ. ಯಾವುದೇ ಉಗ್ರರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದರು.

ಕಾಶ್ಮೀರದಲ್ಲಿ ಹಿಂದಿದ್ದ ರಕ್ತದೋಕುಳಿ ಬದಲು ಶಾಂತಿ ನೆಲೆಸಿತ್ತು. ಪ್ರವಾಸಿಗರೂ ದೊಡ್ಡ ಸಂಖ್ಯೆಯಲ್ಲಿ ಅಲ್ಲಿಗೆ ಹೋಗುತ್ತಿದ್ದರು. ಮೋದಿಜೀ ಅವರ ಸರಕಾರವು ಮತ್ತೆ 3ನೇ ಬಾರಿ ಅಧಿಕಾರಕ್ಕೆ ಬಂದಾಗ ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಸಹಿಸಲು ಸಾಧ್ಯವಾಗದೇ ಪಾಕಿಸ್ತಾನದ ಕೈವಾಡದಿಂದ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಭಾರತದ ಪ್ರಧಾನಿ ಮೋದಿಜೀ ಅವರು ಕೈಗೆ ಬಳೆ ತೊಟ್ಟಿಲ್ಲ. ಅವರು ಉಗ್ರರನ್ನು ಮಟ್ಟಹಾಕುವ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಮ್ಮು- ಕಾಶ್ಮೀರದ ಘಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೌದಿ ಅರೇಬಿಯದಿಂದ ಕೂಡಲೇ ವಾಪಸ್ ಬಂದಿದ್ದಾರೆ. ಕೇಂದ್ರದ ಗೃಹ ಸಚಿವ ಅಮಿತ್ ಶಾ ಜೀ ಅವರು ಕೂಡ ಜಮ್ಮು- ಕಾಶ್ಮೀರಕ್ಕೆ ಧಾವಿಸಿದ್ದಾರೆ. ರಾಜ್ಯದ 28 ಜನರು ಈ ದುಷ್ಕøತ್ಯದಲ್ಲಿ ಪ್ರಾಣ ಕಳಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರು ಮನ ಬಂದಂತೆ ಮಾತನಾಡುತ್ತಿದ್ದಾರೆ. ಕಾಶ್ಮೀರದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುದಕ್ಕೆ ಈ ದೇಶವನ್ನು 60-65 ವರ್ಷ ಆಳಿದಂಥ ಕಾಂಗ್ರೆಸ್ ಪಕ್ಷವೇ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು. ಏಕ್ ದೇಶ್ ಮೇ ದೊ ನಿಶಾನ್, ದೊ ವಿಧಾನ್, ದೊ ಪ್ರಧಾನ್ ನಹೀ ಚಲೇಗಾ ನಹೀ ಚಲೇಗಾ ಎಂದು ಬಿಜೆಪಿ ಸಂಸ್ಥಾಪಕರಲ್ಲೊಬ್ಬರಾದ ಶ್ಯಾಮಪ್ರಸಾದ್ ಮುಖರ್ಜಿ ಅವರು ಅವತ್ತೇ ಹೇಳಿದ್ದರು ಎಂದು ವಿವರಿಸಿದರು. ಕಾಂಗ್ರೆಸ್ಸಿನ ಪಿತೂರಿಯಿಂದ ಅವರು ಕಾಶ್ಮೀರದಲ್ಲೇ ಪ್ರಾಣ ಕಳಕೊಳ್ಳಬೇಕಾಯಿತು ಎಂದು ಆರೋಪಿಸಿದರು.

ಆರ್ಟಿಕಲ್ 370ರ ಪರಿಣಾಮವಾಗಿ ಕಾಶ್ಮೀರದಲ್ಲಿ ಸಾವಿರಾರು ಯೋಧರು ತಮ್ಮ ಪ್ರಾಣ ಕಳಕೊಂಡಿದ್ದಾರೆ. ಅಲ್ಲದೇ ಅನೇಕ ಹಿಂದೂಗಳು ಇದೇ ಕಾರಣಕ್ಕೆ ತಮ್ಮ ಕುಟುಂಬವನ್ನು ಕಳಕೊಂಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಆ ಕುಟುಂಬಗಳು, ಯುವಕರಿಗೆ ನ್ಯಾಯ ಕೊಡಲು 370ನೇ ವಿಧಿ ರದ್ದು ಮಾಡುವುದಾಗಿ ಬಿಜೆಪಿ ಶಪಥ ಮಾಡಿತ್ತು. ನರೇಂದ್ರ ಮೋದಿಜೀ ಅವರ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಆರ್ಟಿಕಲ್ 370 ಅನ್ನು ರದ್ದು ಮಾಡಿದ್ದೇವೆ ಎಂದರು.

ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಪಕ್ಷವು ಬೆಲೆ ಏರಿಕೆಯ ಗ್ಯಾರಂಟಿಯನ್ನು ರಾಜ್ಯದ ಜನತೆಗೆ ನೀಡಿದೆ ಎಂದು ಆಕ್ಷೇಪಿಸಿದರು. ಮುಸ್ಲಿಮರ ತುಷ್ಟೀಕರಣ ನೀತಿ ಹಾಗೂ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಕೋಟ್ಯಂತರ ರೂಪಾಯಿಯನ್ನು ದುರುಪಯೋಗ ಮಾಡಿಕೊಂಡ ಸರಕಾರದ ಕ್ರಮವನ್ನು ಅವರು ಖಂಡಿಸಿದರು.

ಈ ಸಭೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಬಿ.ಶ್ರೀರಾಮುಲು, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ಶಾಸಕರಾದ ಡಾ.ಶಿವರಾಜ್ ಪಾಟೀಲ್, ಮಾನಪ್ಪ ಡಿ.ವಜ್ಜಲ್, ರಾಯಚೂರು ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮಾಜಿ ಸಚಿವರು, ಮಾಜಿ ಶಾಸಕರು, ಮಾಜಿ ಸಂಸದರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು ಮತ್ತು ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login