ಶ್ರೀ ಬಿ.ಎಸ್. ಯಡಿಯೂರಪ್ಪ

ಬಿ.ಎಸ್. ಯಡಿಯೂರಪ್ಪ

 

ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ (ಜನನ: ಫೆಬ್ರುವರಿ 27, 1943) ಕರ್ನಾಟಕದ 19ನೇ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ಮುಖಂಡ. ಇವರು ಕರ್ನಾಟಕ ವಿಧಾನಸಭೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2008 ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ, ಎಸ್. ಬಂಗಾರಪ್ಪನವರನ್ನು ಸುಮಾರು 46 ಸಾವಿರ ಮತಗಳ ಅಂತರದಿಂದ ಪರಾಭವಗೊಳಿಸಿ, ವಿಧಾನಸಭೆಯನ್ನು ಪ್ರವೇಶಿಸುವುದರ ಜೊತೆಗೆ ಬಿಜೆಪಿಗೆ ರಾಜ್ಯಾದ್ಯಂತ ಜಯ ತಂದು ಎರಡನೇ ಬಾರಿಗೆ ಮುಖ್ಯಮಂತ್ರಿ ಪದವಿಗೇರುವ ಮೂಲಕ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ಏರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ವೈಯಕ್ತಿಕ ಜೀವನ

ಬಿ.ಎಸ್.ಯಡಿಯೂರಪ್ಪನವರು ಫೆ. 27, 1943ರಂದು ಮಂಡ್ಯ ಜಿಲ್ಲೆಯ ಕೆ. ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಜನಿಸಿದರು. ತುಮಕೂರು ಜಿಲ್ಲೆಯ ಯಡಿಯೂರು ಊರಿನಲ್ಲಿರುವ ಸಿದ್ಧಲಿಂಗೇಶ್ವರ ದೇವರ ಹೆಸರನ್ನು ಇವರಿಗೆ ನಾಮಕರಣ ಮಾಡಲಾಗಿದೆ. ಯಡಿಯೂರಪ್ಪನವರು ವೀರಶೈವ ಲಿಂಗಾಯತ ಜಾತಿಯ ಬಣಜಿಗ ಪಂಗಡಕ್ಕೆ ಸೇರಿದವರು . ಇವರ ತಂದೆ ಸಿದ್ದಲಿಂಗಪ್ಪ ಮತ್ತು ತಾಯಿ ಪುಟ್ಟತಾಯಮ್ಮ. ಯಡಿಯೂರಪ್ಪನವರಿಗೆ ನಾಲ್ಕು ವರ್ಷವಿರುವಾಗಲೇ ತಾಯಿ ವಿಧಿವಶರಾದರು. ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ್ದಾರೆ.

1965ರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆಯ ಗುಮಾಸ್ತರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಶಿಕಾರಿಪುರಕ್ಕೆ ತೆರಳಿ, ವೀರಭದ್ರ ಶಾಸ್ತ್ರಿಯವರ ಶಂಕರ ಅಕ್ಕಿ ಗಿರಣಿಯಲ್ಲಿ ಗುಮಾಸ್ತರಾಗಿ ಸೇರಿದರು. 1967ರಲ್ಲಿ ಮೈತ್ರಾದೇವಿಯವರನ್ನು ವಿವಾಹವಾದರು. ನಂತರ ಶಿವಮೊಗ್ಗದಲ್ಲಿ ಹಾರ್ಡ್‍ವೇರ್ ಮಳಿಗೆಯನ್ನು ತೆರೆದರು. ವಿಜಯೇಂದ್ರ, ರಾಘವೇಂದ್ರ, ಅರುಣಾದೇವಿ, ಪದ್ಮಾವತಿ, ಉಮಾದೇವಿಯವರು ಯಡಿಯೂರಪ್ಪನವರ ಮಕ್ಕಳು. 2004ರಲ್ಲಿ ಪತ್ನಿ ಮೈತ್ರಾದೇವಿಯವರು ಮರಣ ಹೊಂದಿದರು.

ರಾಜಕೀಯ ಜೀವನ

           ಬಿ.ಎಸ್.ಯಡಿಯೂರಪ್ಪನವರು ಕಾಲೇಜು ದಿನಗಳಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದರು. 1970ರಲ್ಲಿ ಆರ್‍ಎಸ್‍ಎಸ್‍ನ ಶಿಕಾರಿಪುರ ಘಟಕದ ಕಾರ್ಯವಾಹಕರಾಗಿ ನೇಮಕಗೊಳ್ಳುವ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದರು. ಜನಸಂಘದ ಶಿಕಾರಿಪುರ ತಾಲೂಕು ಅಧ್ಯಕರಾಗಿಯೂ ನೇಮಕಗೊಂಡರು. ನಂತರ 1972ರಲ್ಲಿ ಶಿಕಾರಿಪುರ ನಗರ ಪಾಲಿಕೆಗೆ ಚುನಾಯಿತರಾದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧಿತರಾದ ಯಡಿಯೂರಪ್ಪನವರು ಬಳ್ಳಾರಿ ಮತ್ತು ಶಿವಮೊಗ್ಗ ಜೈಲಿನಲ್ಲಿದ್ದರು. 1985ರಲ್ಲಿ ಬಿಜೆಪಿಯ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು. 1988ರಲ್ಲಿ ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು. 1983ರಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು. ನಂತರ ಒಟ್ಟು ಆರು ಬಾರಿ ಶಿಕಾರಿಪುರ ಕ್ಷೇತ್ರದ ಶಾಸಕರಾದರು. ಏಳು, ಎಂಟು, ಒಂಬತ್ತು, ಹತ್ತು, ಹನ್ನೆರಡು ಮತ್ತು ಹದಿಮೂರನೇ ವಿಧಾನಸಭೆಯ ಸದಸ್ಯರಾದರು. 1994 ವಿಧಾನಸಭೆ ಚುನಾವಣೆ ನಂತರ ವಿಧಾನಸಭೆಯ ಪ್ರತಿಪಕ್ಷ ನಾಯಕರಾದರು. 1999 ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನನುಭವಿಸಿದ ಇವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. 2004 ಚುನಾವಣೆಯಲ್ಲಿ ಪುನಃ ವಿಧಾನಸಭೆಗೆ ಆಯ್ಕೆಯಾಗಿ ಪ್ರತಿಪಕ್ಷ ನಾಯಕರಾದರು.

2008 ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರು ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲದೊಂದಿಗೆ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರನ್ನು ಆಗ ಯಡಿಯೂರಪ್ಪನವರು 45,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಆಗ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ದೊರೆತು, ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ರಚನೆಗೊಂಡಿತು. ಮೇ 30, 2008ರಂದು ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಎರಡನೇ ಬಾರಿ ಅಧಿಕಾರ ಸ್ವೀಕರಿಸಿದರು.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಕರ್ನಾಟಕದ ಲೋಕಾಯುಕ್ತ ನೀಡಿದ ತನಿಖಾ ವರದಿಯಲ್ಲಿ ಯಡಿಯೂರಪ್ಪನವರ ಹೆಸರಿತ್ತು. ಆದ್ದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿಯ ಹೈಕಮಾಂಡ್ ಯಡಿಯೂರಪ್ಪನವರಿಗೆ ಸೂಚಿಸಿತು. ಜುಲೈ 31, 2011ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪನವರು ರಾಜೀನಾಮೆ ನೀಡಿದರು. ನಂತರ ನವೆಂಬರ್ 30, 2011ರಂದು ಶಾಸಕ ಸ್ಥಾನ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ಯಡಿಯೂರಪ್ಪ ರಾಜೀನಾಮೆ ನೀಡಿದರು. 2011 ಏಪ್ರಿಲ್‍ನಲ್ಲಿ ಕರ್ನಾಟಕ ಜನತಾ ಪಕ್ಷ ಎಂಬ ನೂತನ ಪಕ್ಷವನ್ನು ನೋಂದಾಯಿಸಿದರು. 2012ರಲ್ಲಿ ಕರ್ನಾಟಕ ಜನತಾ ಪಕ್ಷಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. 2013 ಮೇನಲ್ಲಿ ಕರ್ನಾಟಕ ಜನತಾ ಪಕ್ಷದಿಂದ ಶಿಕಾರಿಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದರು.

ನವೆಂಬರ್ 2013ರಲ್ಲಿ ಯಾವುದೇ ಷರತ್ತಿಲ್ಲದೇ ಬಿಜೆಪಿಗೆ ಹಿಂದಿರುಗುವುದಾಗಿ ಯಡಿಯೂರಪ್ಪ ಘೋಷಿಸಿದರು. ಜನವರಿ 2, 2014ರಂದು ಬಿಜೆಪಿಯಲ್ಲಿ ಕೆಜೆಪಿಯನ್ನು ವಿಲೀನಗೊಳಿಸಿದರು. ನಂತರ 2014 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 3,63,305 ಅಂತರದಿಂದ ಜಯಗಳಿಸಿದರು.

ಮುಖ್ಯಮಂತ್ರಿ

ಯಡಿಯೂರಪ್ಪನವರು ನವೆಂಬರ್ 12, 2007 ರಂದು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು. ಮೂಲಕ ದಕ್ಷಿಣ ಭಾರತ ರಾಜ್ಯಗಳಲ್ಲಿ, ಬಿಜೆಪಿ ಪಕ್ಷದ ಮೊದಲ ಮುಖ್ಯಮಂತ್ರಿಯೆನಿಸಿದರು.

ಧರಂಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು 2006ರಲ್ಲಿ ಜೆಡಿಎಸ್ ವಾಪಸ್ ಪಡೆಯಿತು. ನಂತರ ರಚನೆಗೊಂಡ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಯಡಿಯೂರಪ್ಪನವರು ಉಪ ಮುಖ್ಯಮಂತ್ರಿಯಾದರು. ಮೊದಲ 20 ತಿಂಗಳು ಕುಮಾರಸ್ವಾಮಿಯವರು ಮುಖ್ಯಮಂತ್ರಿ ಮತ್ತು ನಂತರದ 20 ತಿಂಗಳು ಯಡಿಯೂರಪ್ಪನವರು ಮುಖ್ಯಮಂತ್ರಿ ಎಂದು ಸರ್ಕಾರ ರಚನೆ ಸಂದರ್ಭದಲ್ಲಿ ಉಭಯ ಪಕ್ಷಗಳ ನಡುವೆ ಒಪ್ಪಂದವಾಗಿತ್ತು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಉಪಮುಖ್ಯಮಂತ್ರಿ ಯಡಿಯೂರಪ್ಪನವರು ಹಣಕಾಸು ಖಾತೆಗೂ ಸಚಿವರಾಗಿದ್ದರು. ಒಪ್ಪಂದದಂತೆ 2007 ಅಕ್ಟೋಬರಿನಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕಾದಾಗ, ಕುಮಾರಸ್ವಾಮಿಯವರು ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲು ನಿರಾಕರಿಸಿದರು. ಜೆಡಿಎಸ್ ನಡೆ ವಿರೋಧಿಸಿ ಯಡಿಯೂರಪ್ಪ ಮತ್ತು ಬಿಜೆಪಿಯ ಎಲ್ಲ ಸಚಿವರು ರಾಜೀನಾಮೆ ನೀಡಿದರು. ಸಮ್ಮಿಶ್ರ ಸರ್ಕಾರ ಕ್ಕೆ ನೀಡಿದ್ದ ಬೆಂಬಲವನ್ನು ಅಕ್ಟೋಬರ್ 5ರಂದು ಬಿಜೆಪಿ ಹಿಂಪಡೆಯಿತು. ನಂತರ ರಾಷ್ಟ್ರಪತಿ ಆಡಳಿತ ಶುರುವಾಯಿತು. ನವೆಂಬರ್ 7ರಂದು ಬಿಜೆಪಿ ಮತ್ತು ಜೆಡಿಎಸ್ ನಡುವಿನ ಭಿನ್ನಮತ ಶಮನಗೊಂಡು ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಂಡಿತು. . 12, 2007ರಂದು ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಪ್ರಮಾಣವಚನ ಸ್ವೀಕರಿಸಿದರು. ಆದರೆ ಸಚಿವರಿಗೆ ಖಾತೆ ಹಂಚಿಕೆ ವೇಳೆ ಭಿನ್ನಮತ ಉಲ್ಬಣಗೊಂಡಿತು. ಬಿಜೆಪಿ ಮತ್ತು ಜೆಡಿಎಸ್ ನಡುವಿನ ಸಮ್ಮಿಶ್ರ ಸರ್ಕಾರ  ಅಂತ್ಯಗೊಂಡು, ಯಡಿಯೂರಪ್ಪನವರು ನವೆಂಬರ್ 19, 2007ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು.

ಅಲಂಕರಿಸಿದ ಹುದ್ದೆಗಳು

1972 : ಶಿಕಾರಿಪುರ ತಾಲೂಕಿನ ಜನ ಸಂಘದ ಅಧ್ಯಕ್ಷರಾಗಿ ಸಕ್ರಿಯ ರಾಜಕಾರಣ ಪ್ರವೇಶ.

1975 : ಶಿಕಾರಿಪುರ ಪುರಸಭೆ ಸದಸ್ಯರಾಗಿ ಆಯ್ಕೆ, 1977ರಲ್ಲಿ ಅಧ್ಯಕ್ಷ.

1980 : ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ.

1983 : ಮಾಜಿ ಸಚಿವ ವೆಂಕಟಪ್ಪರವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆಪ್ರವೇಶ.

1985 1985ರಿಂದ 1988ವರೆಗೆ ಬಿಜೆಪಿ ಜಿಲ್ಲಾಧ್ಯಕ್ಷ, 1988ರಲ್ಲಿ ರಾಜ್ಯಾಧ್ಯಕ್ಷ, 1992ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನ ನಿರ್ವಹಣೆ.

1994 : ವಿಧಾನಸಭೆ ಪ್ರತಿಪಕ್ಷದ ನಾಯಕ.

1999 : ವಿಧಾನ ಸಭೆ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಸೋಲು.

1999  : ಮತ್ತೆ ರಾಜ್ಯಾಧ್ಯಕ್ಷ, 2000ರಲ್ಲಿ ವಿಧಾನ ಪರಿಷತ್ ಸದಸ್ಯ.

2004 : ಐದನೇ ಬಾರಿಗೆ ವಿಧಾನಸಭೆ ಪ್ರವೇಶ, ಮತ್ತೊಮ್ಮೆ ಪ್ರತಿಪಕ್ಷದ ನಾಯಕ.

2006 : ಸಮ್ಮಿಶ್ರ ಸರ್ಕಾರ ರಚನೆ, ಉಪಮುಖ್ಯಮಂತ್ರಿ, ಹಣಕಾಸು ಮತ್ತು ಅಬಕಾರಿ ಖಾತೆಗಳ ನಿರ್ವಹಣೆ.

2007 : ನವೆಂಬರ್‌12ರಿಂದ 17ರವರೆಗೆ 7 ದಿನ ಮಾತ್ರ ಮುಖ್ಯಮಂತ್ರಿಯಾಗಿದ್ದರು.

2008: ಮೇ 30 ಶುಕ್ರವಾರ ಕರ್ನಾಟಕದ 25 ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.

2011 : ಜುಲೈ 31ರಂದು ಮುಖ್ಯಮಂತ್ರಿಗಳ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದರು.

2014 : 2014 ಲೋಕಸಭಾಚುನಾವಣೆಯಲ್ಲಿ 3,63,305 ಮತಗಳ ಅಂತರದಿಂದ ಲೋಕಸಭಾಸದಸ್ಯರಾಗಿ

2018 : ಮೇ 17ರಿಂದ ಮೇ 19ವರೆಗೆ 2 ದಿನ ಮಾತ್ರ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.

2019 : ಜೂಲೈ 26ರಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.