ಶ್ರೀ ಕೆ. ಎಸ್. ಈಶ್ವರಪ್ಪ
ಶ್ರೀ ಕೆ. ಎಸ್. ಈಶ್ವರಪ್ಪ (ಜನನ 10 ಜೂನ್ 1948) ಒಬ್ಬ ಭಾರತೀಯ ಹಿರಿಯ ಬಿಜೆಪಿಯ ನೇತಾರರಲ್ಲಿ ಒಬ್ಬರು.
ಶ್ರೀ ಕೆ. ಎಸ್. ಈಶ್ವರಪ್ಪ ಅವರು 12 ಜುಲೈ 2012 ರಿಂದ 12 ಮೇ 2013 ರವರೆಗೆ ಕರ್ನಾಟಕದ 6 ನೇ ಉಪಮುಖ್ಯಮಂತ್ರಿಯಾಗಿದ್ದರು. ಅವರು 20 ಆಗಸ್ಟ್ 2019 ರಿಂದ 26 ಜುಲೈ 2021 ರವರೆಗೆ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದರು. 2012 ರಿಂದ 2013 ರವರೆಗೆ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಏಳನೇ ಉಪಮುಖ್ಯಮಂತ್ರಿಯಾಗಿದ್ದರು. ಕೆ. ಎಸ್. ಈಶ್ವರಪ್ಪ ಹುಟ್ಟಿದ್ದು ಬಳ್ಳಾರಿಯಲ್ಲಿ. ಅವರ ತಂದೆ ಶರಣಪ್ಪ ಮತ್ತು ತಾಯಿ ಬಸ್ಸಮ್ಮ. 1950 ರ ದಶಕದ ಆರಂಭದಲ್ಲಿ ಶಿವಮೊಗ್ಗಕ್ಕೆ ತೆರಳಿದರು. ಅವರ ಪೋಷಕರು ಭೂಪಾಲಂ ಅಡಿಕೆ ಮಂಡಿಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಯುವಕ ಈಶ್ವರಪ್ಪ ಕೂಡ ತನ್ನ ಹೆತ್ತವರೊಂದಿಗೆ ಕೆಲಸಕ್ಕೆ ಹೋಗುತ್ತಿದ್ದರು. ಅವರ ತಾಯಿ ಈ ಕ್ರಮವನ್ನು ವಿರೋಧಿಸಿದರು, ಶಿಕ್ಷಣದ ಮೇಲೆ ಕೇಂದ್ರೀಕರಿಸಲು ಮತ್ತು ಸಮಾಜದಲ್ಲಿ ಉತ್ತಮ ಹೆಸರನ್ನು ಗಳಿಸಲು ಒತ್ತಾಯಿಸಿದರು. ಬಾಲ್ಯದಲ್ಲಿ ಪಡೆದ ಈ ಸ್ಫೂರ್ತಿ ಅಂತಿಮವಾಗಿ ಸಮಾಜ ಸೇವಕನಾಗಲು ಕಾರಣವಾಯಿತು.
ಬಾಲ್ಯದಲ್ಲಿ ಈಶ್ವರಪ್ಪ ಅವರಿಗೆ ಕ್ರೀಡೆ ಮತ್ತು ಸಂಗೀತದಲ್ಲಿ ಆಸಕ್ತಿ ಇತ್ತು. ಅವರ ಸಹಪಾಠಿಗಳಲ್ಲಿ ಒಬ್ಬರು ಡಿ.ಎಂ. ರವೀಂದ್ರ ಅವರು ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್. ಎಸ್. ಎಸ್.) ಪ್ರಾಂತ ಪ್ರಚಾರಕರಾದರು. ಶಿವಮೊಗ್ಗದ ಪ್ರಸಿದ್ಧ ವಿ. ಎಚ್. ಪಿ ನಾಯಕ ನರಸಿಂಹಮೂರ್ತಿ ಅಯ್ಯಂಗಾರ್ ರವರು ಇವರನ್ನು ಆರ್. ಎಸ್. ಎಸ್ಗೆ ಪರಿಚಯಿಸಿದರು. ಹೀಗಾಗಿ ಅವರ ಸಾರ್ವಜನಿಕ ಜೀವನವು ಆರ್ ಎಸ್ ಎಸ್ ಕಾರ್ಯಕರ್ತನಾಗಿ ಪ್ರಾರಂಭವಾಯಿತು.
ಅವರು ಶಿವಮೊಗ್ಗದ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎ.ಬಿ.ವಿ. ಪಿ) ನೊಂದಿಗೆ ಸಕ್ರಿಯವಾಗಿ ಕೆಲಸ ಮಾಡಿದರು. ಪದವಿ ಮುಗಿದ ನಂತರ ಶಿವಮೊಗ್ಗ ನಗರದಲ್ಲಿ ಸ್ವಂತ ಖಾಸಗಿ ಉದ್ಯಮ ಆರಂಭಿಸಿದರು. ಹಿಂದಿನ ಭಾರತೀಯ ಜನಸಂಘದ ಸಂಪರ್ಕಕ್ಕೆ ಬಂದು ಅಲ್ಲಿ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿದರು. 1989 ರಲ್ಲಿ, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಅಂದಿನ ಆರೋಗ್ಯ ಸಚಿವ ಪ್ರಭಾವಿ ಕೆ. ಎಚ್. ಶ್ರೀನಿವಾಸ್ ಅವರನ್ನು 1,304 ಮತಗಳ ಅಂತರದಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಅವರು ಜನಪ್ರಿಯರಾದರು ಮತ್ತು ಈ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದರು, 1999 ರಲ್ಲಿ ಒಮ್ಮೆ ಮಾತ್ರ ಸೋತರು.
1992 ರಲ್ಲಿ ಅವರು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾದರು ಮತ್ತು 1994 ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಉತ್ತಮ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. 2000 ರಲ್ಲಿ, ಎನ್ ಡಿ ಎ ಸರ್ಕಾರ ಅಧಿಕಾರದಲ್ಲಿದ್ದಾಗ ಅವರು ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡರು.
ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು. 2008 ರಲ್ಲಿ ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ವಿಜಯದ ನಂತರ, ಅವರು ಬಿ. ಎಸ್. ಯಡಿಯೂರಪ್ಪನವರ ಸರ್ಕಾರದಲ್ಲಿ ವಿದ್ಯುತ್ ಸಚಿವರಾದರು. ಜನವರಿ 2010 ರಲ್ಲಿ, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಆಡಳಿತಾರೂಢ ಬಿಜೆಪಿಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು.
ಜುಲೈ 2012 ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದಾಗ ಈಶ್ವರಪ್ಪನವರು ಉಪಮುಖ್ಯಮಂತ್ರಿಯಾದರು. ಅವರಿಗೆ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಖಾತೆಗಳನ್ನೂ ವಹಿಸಲಾಗಿತ್ತು. ಕೆ. ಎಸ್. ಈಶ್ವರಪ್ಪಅವರು 2014ರಲ್ಲಿ ಕರ್ನಾಟಕ ವಿಧಾನಪರಿಷತ್ತಿಗೆ ತಮ್ಮ ಪಕ್ಷದಿಂದ ನಾಮನಿರ್ದೇಶನಗೊಂಡು ಪರಿಷತ್ತಿನ ವಿರೋಧಪಕ್ಷದ ನಾಯಕರಾದರು.
2018 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅವರು ಮತ್ತೊಮ್ಮೆ ಶಿವಮೊಗ್ಗದಿಂದ ಸ್ಪರ್ಧಿಸಿ ಜಯಶೀಲರಾದರು. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೆ ಸಂಪುಟ ಸಚಿವರಾಗಿ ಸೇರ್ಪಡೆಗೊಂಡರು.