ಬಿ.ವೈ.ವಿಜಯೇಂದ್ರ

ವಿಜಯೇಂದ್ರ ಯಡಿಯೂರಪ್ಪ, ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಬಹುಚರ್ಚಿತ ಹೆಸರು, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರು ಕಿರಿಯ ವಯಸ್ಸಿನಲ್ಲಿಯೇ ಪಕ್ಷದ ಉನ್ನತ ಸ್ಥಾನಕ್ಕೇರುವ ಮೂಲಕ, ಬಿಜೆಪಿ ಅಷ್ಟೇ ಅಲ್ಲದೆ ರಾಜ್ಯದಲ್ಲಿ ವಿಶೇಷವಾಗಿ ಪ್ರತಿಪಕ್ಷಗಳ ಗಮನವನ್ನು ಸೆಳೆಯುವಂತೆ ವಿಶೇಷ ಛಾಪು ಮೂಡಿಸಿರುವ ಯುವ ನೇತಾರ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರರಾದ ವಿಜಯೇಂದ್ರ ಕಾನೂನು ಪದವೀಧರರು, ಆದರೆ, ತಂದೆಯ ಪ್ರಭಾವವನ್ನು ಬಳಸಿಕೊಳ್ಳದೇ, ಅವರ ಆಶೀರ್ವಾದದ ಬಲದಿಂದ, ಅವರ ಗೌರವಕ್ಕೂ ಚ್ಯುತಿ ಆಗದಂತೆ, ಅವರ ರಾಜಕೀಯ ಹೋರಾಟಗಳನ್ನು ಹತ್ತಿರದಿಂದ ನೋಡಿ ಬೆಳೆದ ವಿಜಯೇಂದ್ರರವರು, ತನ್ನದೇ ಆದ ಛಾಪು ಮೂಡಿಸುತ್ತಾ ರಾಜಕಾರಣದ ಪಟ್ಟುಗಳನ್ನು ಕಲಿತುಕೊಂಡವರು.

ವಿಜಯೇಂದ್ರರವರ ಸಂಘಟನಾತ್ಮಕ ಶಕ್ತಿಯನ್ನು ನಿರೂಪಿಸಲು ಮೊದಲು ವೇದಿಕೆಯಾದದ್ದು ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರ. 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಭಾಗಕ್ಕೆ ಬಿಜೆಪಿಯಲ್ಲಿ ಪ್ರಭಾವ ಬೀರುವ ನಾಯಕನ ಕೊರತೆ ತುಂಬುವ ಅವಕಾಶ ಬಂದೊದಗಿತ್ತು. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಡ ಬಂದ ಕಾರಣ ಅದೇ ಕ್ಷೇತ್ರವನ್ನೇ ತನ್ನ ಕಾರ್ಯಕ್ಷೇತ್ರವಾಗಿ ಮಾಡಿಕೊಳ್ಳಬೇಕಾಯಿತು. ಕ್ಷೇತ್ರದಾದ್ಯಂತ ಓಡಾಡಿ ಪಕ್ಷದ ಸಂಘಟನೆಗೆ ಒತ್ತು ನೀಡಿದರು. ಜನರ ಜೊತೆಗೆ ಬೆರೆಯವ ಗುಣ, ಸಂಘಟನೆ, ಸ್ಪಂದನೆಯಿಂದಾಗಿ ಕ್ಷೇತ್ರದಾದ್ಯಂತ ಪಕ್ಷದ ಪರವಾಗಿ ಸಕಾರಾತ್ಮಕ ಅಭಿಪ್ರಾಯ ಮೂಡಿಸಲು ನೆರವಾಯಿತು. ಕೆಳಹಂತದಲ್ಲಿ ವ್ಯವಸ್ಥಿತವಾಗಿ ಸಿದ್ಧತೆ ಆಗಿದ್ದರೂ ಪಕ್ಷದ ತೀರ್ಮಾನಕ್ಕೆ ಬದ್ದರಾಗಿ ಆ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು. ಈ ಮೂಲಕ ಬಿಜೆಪಿಯಲ್ಲಿ ಪಕ್ಷ ಹಾಗೂ ನಾಯಕರ ಮಾತೇ ಅಂತಿಮ ಎಂಬ ಸಂದೇಶವನ್ನು ಎಲ್ಲ ಕಾರ್ಯಕರ್ತರಿಗೆ ರವಾನಿಸಿದರು. ಇದನ್ನು ಸೂಚ್ಯವಾಗಿ ಗಮನಿಸಿದ ಪಕ್ಷದ ಹೈಕಮಾಂಡ್ ಅವರನ್ನು ಕೆಲವೇ ದಿನಗಳಲ್ಲಿ ಬಿಜೆಪಿ ರಾಜ್ಯ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಸಂಘಟನೆಯ ಗುರುತರ ಹೊಣೆಗಾರಿಕೆಯನ್ನು ನೀಡಿತ್ತು. ಆದರೆ, ವರುಣಾ ಕ್ಷೇತ್ರದಲ್ಲಿ ಆ ಬಾರಿ ಸ್ಪರ್ಧೆ ಮಾಡದೇ ಇದ್ದರೂ ಒಟ್ಟು ಸಂಘಟನೆಯ ಫಲವಾಗಿ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಗಣನೀಯ ಮತಗಳು ಚಲಾವಣೆಗೊಂಡಿತ್ತು ಎಂಬುದು ಗಮನಾರ್ಹ. ಇದು, ಇವರ ಸಂಘಟನೆಯ ಸಾಮರ್ಥ್ಯಕ್ಕೆ ಕನ್ನಡಿಯೂ ಹೌದು.

ಬಿಜೆಪಿ ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಏಪ್ರಿಲ್ 2018ರಲ್ಲಿ ನೇಮಕಗೊಂಡ ನಂತರದ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ  ಯುವ ಸಂಘಟನೆಯನ್ನು ಬಲಪಡಿಸಿದರು. ಈ ಮೂಲಕ ಒಂದು ಪಕ್ಷದ ಗಟ್ಟಿನೆಲೆ ಯುವಶಕ್ತಿ, ಅದನ್ನು ಸಂಘಟನೆಗೊಳಿಸಬೇಕು ಎಂಬುದನ್ನು ಸೂಚ್ಯವಾಗಿ ಅರಿತುಕೊಂಡ ಅವರು ಅದನ್ನು ಸಾಬೀತುಪಡಿಸಿದರು. ಆ ನಂತರದ ವರ್ಷಗಳಲ್ಲಿ ನಡೆದ ವಿಧಾನಸಭೆ ಉಪಚುನಾವಣೆಗಳಲ್ಲಿ ಸಂಘಟನಾತ್ಮಕ ಹಾಗೂ ಜನರನ್ನು ಸೆಳೆಯುವ ಕಾರ್ಯಶೈಲಿಯಿಂದಾಗಿ ಪಕ್ಷಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.

ಮತ್ತೊಮ್ಮೆ ಇವರ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಿದ್ದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರ. ಇದು, ಇವರ ತಂದೆ ಯಡಿಯೂರಪ್ಪ ಅವರ ಹುಟ್ಟೂರು ಬೂಕನಕೆರೆ ಇರುವ ಕ್ಷೇತ್ರವೂ ಹೌದು. ಬಿಜೆಪಿಗೆ ನೆಲೆಯಿಲ್ಲದ ಮಂಡ್ಯ ಜಿಲ್ಲೆ ಮುಖ್ಯವಾಗಿ, ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನದ್ದೇ ಪ್ರಾಬಲ್ಯ. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯೇತರ ಪಕ್ಷಗಳ ಪ್ರಾಬಲ್ಯವಿರುವ ಕೆ.ಆರ್.ಪೇಟೆಯಲ್ಲಿ ಪಕ್ಷವನ್ನು ಗೆಲುವಿನ ದಡ ಮುಟ್ಟಿಸುವ ಸವಾಲು ಸ್ವೀಕರಿಸಿ, ಪಕ್ಷವು ಒಪ್ಪಿಸಿದ ಚುನಾವಣಾ ಉಸ್ತುವಾರಿ ಹೊಣೆಯನ್ನು ಹೊತ್ತುಕೊಂಡರು. ಬಹುತೇಕ ಒಂದು ತಿಂಗಳು ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದರು. ಸಣ್ಣ, ಸಣ್ಣ ಸಮುದಾಯ, ವಿವಿದ ಸ್ತರದ ಜನರ ಮುಖಂಡರನ್ನು ಭೇಟಿಯಾಗಿ ಬಿಜೆಪಿ ಪರವಾದ ಅಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾದರು. ಇವರ ನಡೆ, ನುಡಿ ಮತ್ತು ಸಂಘಟನೆ ಶೈಲಿ ಮತ್ತೆ ಫಲ ನೀಡಿತು. ಪಕ್ಷದ ಅಸ್ತಿತ್ವವೇ ಇಲ್ಲದಿದ್ದ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೆ.ಸಿ.ನಾರಾಯಣಗೌಡ ಭಾರಿ ಅಂತರದಿಂದಲೇ ಗೆದ್ದರು.  ಆ ನಂತರ ಎದುರಾದ ತುಮಕೂರು ಜಿಲ್ಲೆ ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡರ ಗೆಲುವು ಇವರ ಶ್ರಮಕ್ಕೆ ಫಲವನ್ನು ನೀಡುತ್ತದೆ.  ಕ್ಷೇತ್ರದ ಇತಿಹಾಸದಲ್ಲಿಯೇ ಹೆಚ್ಚಿನ ಮತಗಳ ಅಂತರದಿಂದ ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯು ಗೆಲುವು ಸಾಧಿಸುತ್ತಾರೆ. 

ಇವರ ಸಾಧನೆ ಮತ್ತು ಸಂಘಟನಾ ಶಕ್ತಿಯನ್ನು ಪಕ್ಷವು ಗುರುತಿಸಿ. ಕಿರಿಯ ವಯಸ್ಸಿನಲ್ಲಿಯೇ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ನೇಮಿಸುತ್ತದೆ. 2020ರಿಂದ ಪಕ್ಷದ ಉಪಾಧ್ಯಕ್ಷರಾಗಿ ತಮ್ಮ ಹೊಣೆಯನ್ನು ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ರಾಜ್ಯ ಬಿಜೆಪಿ  ಅಧ್ಯಕ್ಷರಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.