15ರಂದು ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ : ವಿಜಯೇಂದ್ರ


13-05-2025
Press Release

Download Document

13-5-2025

 

ಪ್ರಕಟಣೆಯ ಕೃಪೆಗಾಗಿ

 

15ರಂದು ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ, ಜಿಲ್ಲೆ, ತಾಲ್ಲೂಕಿನಲ್ಲೂ ಕಾರ್ಯಕ್ರಮ ಹಗುರ ಮಾತು ಸಲ್ಲ: ವಿಜಯೇಂದ್ರ

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಜೀ ಅವರು ಕದನವಿರಾಮ ಘೋಷಿಸಿದ್ದರೆ ಅದು ಶಾಶ್ವತ ಅಲ್ಲ ಎಂದು ಪ್ರಧಾನಿಯವರೇ ಸ್ಪಷ್ಟಪಡಿಸಿದ್ದಾರೆ. ಇದನ್ನು ಕಾಂಗ್ರೆಸ್ಸಿನವರು ಅರ್ಥ ಮಾಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಎಚ್ಚರಿಸಿದರು.

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಸಚಿವ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ಸಿನ ಇತರ ಮುಖಂಡರು ಆಪರೇಷನ್ ಸಿಂದೂರ ಕದನವಿರಾಮದ ಬಳಿಕ ಸ್ವಲ್ಪ ಹಗುರವಾಗಿ ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿಜೀ ಅವರು ಅಮೆರಿಕ ಅಧ್ಯಕ್ಷ ಟ್ರಂಪ್‍ಗೆ ಶರಣಾಗಿದ್ದಾರೆ ಎಂಬಂತೆ ಟೀಕಿಸಿದ್ದಾರೆ ಎಂದು ಆಕ್ಷೇಪಿಸಿದರು.

ಕದನವಿರಾಮ ಎಂಬುದು ಒಂದು ರಾಜನೀತಿ ಎಂದು ವಿವರಿಸಿದರು. ಪ್ರತಿಯೊಬ್ಬ ಭಾರತೀಯರೂ ಸೇನೆ ಜೊತೆ ಇರಬೇಕು ಎಂದು ನೆನಪಿಸಲು ಬಯಸುವುದಾಗಿ ಹೇಳಿದರು. ಪ್ರಧಾನಿಯವರು ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.

ನಮ್ಮ ದಾಳಿಗೆ ಬೆದರಿದ ಪಾಕಿಸ್ತಾನವು ಬೆದರಿ ಅಮೆರಿಕದ ಸಹಾಯ ಕೇಳಿದ್ದನ್ನು ಆಲೋಚಿಸಬೇಕು. ಇನ್ನೇನಾದರೂ ಅಹಿತಕರ ಘಟನೆ ಆದರೆ ಕಣ್ಮುಚ್ಚಿಕೊಂಡು ಕೂರುವ ಪ್ರಶ್ನೆ ಇಲ್ಲ ಎಂದು ಪ್ರಧಾನಿಯವರು ಹೇಳಿದ್ದಾರೆ ಎಂದು ವಿವರಿಸಿದರು. ಏನೇ ದುರ್ಘÀಟನೆ ಆದರೂ ಯುದ್ಧವೆಂದು ಪರಿಗಣಿಸಿ ಪ್ರತೀಕಾರ ತೀರಿಸುವುದಾಗಿ ಹೇಳಿದ್ದಾರೆ ಎಂದರು.

ಪಕ್ಷರಹಿತವಾಗಿ ತಿರಂಗಾ ಯಾತ್ರೆ..

ಆಪರೇಷನ್ ಸಿಂದೂರದ ಬಳಿಕ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ ಜೀ ಅವರು ಒಂದು ಕರೆ ನೀಡಿದ್ದಾರೆ. ಇಡೀ ದೇಶದ ಎಲ್ಲ ರಾಜ್ಯಗಳಲ್ಲಿ ತಿರಂಗಾ ಯಾತ್ರೆ ನಡೆಸಬೇಕು. ‘ರಾಷ್ಟ್ರ ರಕ್ಷಣೆಗಾಗಿ ನಾಗರಿಕರು’ ಅಡಿಯಲ್ಲಿ ಆಪರೇಷನ್ ಸಿಂದೂರದ ಜೊತೆ ನಾವಿದ್ದೇವೆ; ಭಾರತದ ಸೇನೆ ಜೊತೆ ನಾವೆಲ್ಲರೂ ಇದ್ದೇವೆ ಎಂದು ಸಂದೇಶ ನೀಡಬೇಕು ಎಂದಿದ್ದಾರೆ. ಕರ್ನಾಟಕದಲ್ಲೂ ತಿರಂಗಾ ಯಾತ್ರೆ ಮಾಡಲಿದ್ದೇವೆ ಎಂದು ವಿವರಿಸಿದರು.

ಮೇ 15ರಂದು ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ ಇದೆ. ನಿವೃತ್ತ ಯೋಧರು, ಅವರ ಕುಟುಂಬದ ಸದಸ್ಯರು, ರೈತರು, ವೈದ್ಯರು, ಎಂಜಿನಿಯರ್‍ಗಳು ಸೇರಿ ಎಲ್ಲ ವೃತ್ತಿನಿರತರು, ಎಲ್ಲ ವರ್ಗದ ಜನರು ಭಾಗವಹಿಸುತ್ತಾರೆ ಎಂದು ತಿಳಿಸಿದರು. ಮೇ 15ರಂದು ಮಂಗಳೂರು, ಬೆಳಗಾವಿ ಮತ್ತಿತರ ಪ್ರಮುಖ ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಮೇ 16ರಂದು ಶಿವಮೊಗ್ಗ ಮತ್ತಿತರ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸುತ್ತೇವೆ ಎಂದು ಹೇಳಿದರು.

ಮೇ 18ರಿಂದ 23ರವರೆಗೆ ತಾಲ್ಲೂಕು ಕೇಂದ್ರಗಳಲ್ಲಿ ತಿರಂಗಾ ಯಾತ್ರಾ ನಡೆಸಲಾಗುವುದು. ದೇಶದ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.

ಪ್ರಧಾನಿಯವರ ದಿಟ್ಟ ನಿರ್ಧಾರ...

ಸ್ವಾತಂತ್ರ್ಯಾನಂತರ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ನಿರಂತರವಾಗಿತ್ತು. ಪೆಹಲ್ಗಾಂ ಘಟನೆ ನಂತರ ಉಗ್ರರನ್ನು ಮಟ್ಟ ಹಾಕಬೇಕೆಂಬ ಹಾಗೂ ಉಗ್ರಗಾಮಿಗಳಿಗೆ ಶಕ್ತಿ ಕೊಡುವ ಪಾಕಿಸ್ತಾನಕ್ಕೆ ದಿಟ್ಟ ಉತ್ತರವನ್ನು ಭಾರತ ನೀಡಬೇಕೆಂಬ ಅಭಿಪ್ರಾಯ ಇಡೀ ದೇಶದಲ್ಲಿ ವ್ಯಕ್ತವಾಗಿತ್ತು ಎಂದರು. ಮೋದಿಜೀ ಅವರು ದಿಟ್ಟ ನಿರ್ಧಾರ ಮಾಡಿ, ಉಗ್ರರನ್ನು ಬುಡಸಮೇತ ಕಿತ್ತು ಹಾಕಲು ಹಾಗೂ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಮುಂದಾದರು. ಆಪರೇಷನ್ ಸಿಂದೂರ ಕೈಗೊಂಡರು ಎಂದು ವಿವರಿಸಿದರು. ಪಾಕಿಸ್ತಾನಕ್ಕೂ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆದಿದೆ ಎಂದು ಮೆಚ್ಚುಗೆ ಸೂಚಿಸಿದರು.

ಶಾಶ್ವತ ಕದನವಿರಾಮ ಅಲ್ಲ..

ಕದನವಿರಾಮ ಕುರಿತು ಕೂಡ ಅವರು ಮಾಹಿತಿ ಕೊಟ್ಟರು. ಪ್ರಧಾನಿಯವರ ನಿನ್ನೆಯ ಭಾಷಣದಲ್ಲಿ ಕದನವಿರಾಮ ಶಾಶ್ವತ ಅಲ್ಲ ಎಂದು ತಿಳಿಸಿದ್ದಾಗಿ ವಿವರಿಸಿದರು. ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಕಡೆಯಿಂದ ಯಾವುದೇ ಭಯೋತ್ಪಾದನಾ ದಾಳಿ ನಡೆದರೂ ಅದನ್ನು ಯುದ್ಧವೆಂದೇ ಪರಿಗಣಿಸುವುದಾಗಿ ಮಾನ್ಯ ಪ್ರಧಾನಿಯವರು ತಿಳಿಸಿದ್ದಾರೆ ಎಂದು ಹೇಳಿದರು.

ನೀರು ಮತ್ತು ರಕ್ತ ಇವೆರಡು ಸಹ ಒಟ್ಟಾಗಿ ಹರಿಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನೂ ಪ್ರಧಾನಿಯವರು ನೀಡಿದ್ದಾರೆ. ಇದು ಪಾಕಿಸ್ತಾನ ಮತ್ತು ಜಗತ್ತಿಗೆ ನೀಡಿದ ಸಂದೇಶ ಎಂದು ವಿಶ್ಲೇಷಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ.ಜಗದೀಶ್, ಶಾಸಕ ಎಸ್.ಎನ್ ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಾ ಧನಂಜಯ್ ಸರ್ಜಿ, ವಿಧಾನಪರಿಷತ್ ಮಾಜಿ ಸದಸ್ಯ ಎಸ್ ರುದ್ರೇಗೌಡ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಬಿ.ಹರಿಕೃಷ್ಣ, ಜಿಲ್ಲಾ ವಕ್ತಾರ ಎಸ್.ಎಸ್.ಜ್ಯೋತಿ ಪ್ರಕಾಶ್, ಜಿಲ್ಲಾ ಮಾಧ್ಯಮ ಪ್ರಮುಖ್ ಕೆ.ವಿ.ಅಣ್ಣಪ್ಪ, ಸಹ ಪ್ರಮುಖ್ ಚಂದ್ರಶೇಖರ ಎಸ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login