
8-4-2025
ಪ್ರಕಟಣೆಯ ಕೃಪೆಗಾಗಿ
50 ಅಗತ್ಯ ವಸ್ತುಗಳ ಬೆಲೆ ಏರಿಸಿದ ಮುಖ್ಯಮಂತ್ರಿಗೆ ಕಪಾಳಮೋಕ್ಷ ಬಯಸುವ ಜನತೆ: ವಿಜಯೇಂದ್ರ
ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು 20 ತಿಂಗಳಾಗಿದೆ. 50 ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಮಾಡಿರುವ ಸಿದ್ದರಾಮಯ್ಯನವರಿಗೆ ಕಪಾಳಮೋಕ್ಷ ಮಾಡಬೇಕೆಂದು ರಾಜ್ಯದ ಜನತೆ ಚರ್ಚೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಬಿಜೆಪಿ ಜನಾಕ್ರೋಶ ಯಾತ್ರೆಯ ಎರಡನೇ ದಿನವಾದ ಇಂದು ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದ ಕೇಂದ್ರ ಸರಕಾರಕ್ಕೆ ಕಪಾಳಮೋಕ್ಷ ಮಾಡಬೇಕೆಂದು ದುರಹಂಕಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೆ ಕೊಟ್ಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಜನವಿರೋಧಿ ಕಾಂಗ್ರೆಸ್ಸಿಗರು, ಸಿದ್ದರಾಮಯ್ಯನವರಿಗೆ ಕಪಾಳಮೋಕ್ಷ ಮಾಡಬೇಕೇ? ಕೇಂದ್ರದಲ್ಲಿ ಮೂರನೇ ಬಾರಿಗೆ ಸರಕಾರ ಬಂದು, ಬಡವರಿಗೆ ಉಜ್ವಲ ಸೇರಿ ಅನೇಕ ಜನಪರ ಯೋಜನೆಗಳನ್ನು ಕೊಟ್ಟಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರ ಸರಕಾರಕ್ಕೆ ಕಪಾಳಮೋಕ್ಷ ಮಾಡಬೇಕೇ ಎಂದು ಅವರು ಪ್ರಶ್ನೆಯನ್ನು ಮುಂದಿಟ್ಟರು.
ನಮ್ಮ ನೀರು ನಮ್ಮ ಹಕ್ಕು ಎಂದು ಮೊಸಳೆಕಣ್ಣೀರು ಸುರಿಸಿ ಪಾದಯಾತ್ರೆ ಮಾಡಿ ನಿಮ್ಮ ಮತ ಪಡೆದು ಅಧಿಕಾರಕ್ಕೆ ಬಂದ ಪಕ್ಷ ಕಾಂಗ್ರೆಸ್ ಪಕ್ಷವು ಆ ಮಾತನ್ನೇ ಮರೆತಿದೆ ಎಂದು ಟೀಕಿಸಿದರು. ಅಧಿಕಾರ ಕೊಡಿ; ಜನಪರ ಆಡಳಿತ ನೀಡುವುದಾಗಿ ತಿಳಿಸಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ಅದೆಲ್ಲವನ್ನೂ ಕಾಂಗ್ರೆಸ್ಸಿಗರು ಮರೆತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ಸಿಗರು ರಾಜ್ಯದಲ್ಲಿ ರಾಮರಾಜ್ಯ ನಿರ್ಮಿಸಲಿದ್ದಾರೆ ಎಂದು ಅಂದುಕೊಂಡಿದ್ದೆವು. ಅಭಿವೃದ್ಧಿ ಕೆಲಸ ಮಾಡುತ್ತಾರೆ; ರೈತರ ಕಣ್ಣೀರು ಒರೆಸುತ್ತಾರೆ; ದೀನದಲಿತರ, ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಲಿದ್ದಾರೆ ಎಂದು ಭಾವಿಸಿದ್ದೆವು. ಆದರೆ, ಅದ್ಯಾವ ಕೆಲಸವನ್ನೂ ಮಾಡಿಲ್ಲ ಎಂದು ಟೀಕಿಸಿದರು.
ಅಹಿಂದ ಹೆಸರು ಹೇಳಿಕೊಂಡು ಮತ ಪಡೆದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಎಲ್ಲ ಹಿಂದುಳಿದ ಸಮುದಾಯಗಳನ್ನು ಮರೆತಿದ್ದಾರೆ. ಇವರು ಅಲ್ಪಸಂಖ್ಯಾತರು, ಮುಸಲ್ಮಾನರ ಜಪ ಮಾಡುತ್ತಿದ್ದು, ರಾಜ್ಯದ ಎಲ್ಲ ಹಿಂದುಳಿದ ಸಮಾಜಗಳನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ಆರೋಪಿಸಿದರು. ಜನಹಿತವನ್ನೇ ಮರೆತ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ , ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಮಾಜಿ ಸಂಸದೆ ಸುಮಲತಾ ಅಂಬರೀಷ್, ಮಾಜಿ ಸಚಿವ ನಾರಾಯಣಗೌಡ, ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ ರವಿ , ಮಾಜಿ ಸಚಿವ ಬಿ. ಶ್ರೀರಾಮುಲು, ಮಂಡ್ಯ ಜಿಲ್ಲಾಧ್ಯಕ್ಷÀ ಡಾ. ಇಂದ್ರೇಶ್, ಮುಖಂಡರಾದ ಅಶೋಕ್ ಜಯರಾಮ್, ಸಾದೊಳಲು ಸ್ವಾಮಿ, ಇಂಡವಾಳು ಸಚ್ಚಿದಾನಂದ, ಡಾ. ಸಿದ್ದರಾಮಯ್ಯ ಮುಂತಾದ ಅನೇಕ ಹಿರಿಯ ನಾಯಕರು ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
To Write Comment Please Login