ಆಡಳಿತ ಪಕ್ಷದ ಇಬ್ಬರು ಶಾಸಕರ ಹೆಸರು ಕೂಡಲೇ ಸೇರಿಸಲು ವಿಜಯೇಂದ್ರ ಆಗ್ರಹ


05-04-2025
Press Release

Download Document

5-4-2025

 

ಪ್ರಕಟಣೆಯ ಕೃಪೆಗಾಗಿ

 

ಪೊಲೀಸ್ ಠಾಣೆ ಮೂಲಕ ಹಕ್ಕು ಕಿತ್ತುಕೊಳ್ಳಲು ಅವಕಾಶ ಇಲ್ಲ...

ಆಡಳಿತ ಪಕ್ಷದ ಇಬ್ಬರು ಶಾಸಕರ ಹೆಸರು ಕೂಡಲೇ ಸೇರಿಸಲು ವಿಜಯೇಂದ್ರ ಆಗ್ರಹ

 

ಮಡಿಕೇರಿ: ಬಿಜೆಪಿಯ ಸಕ್ರಿಯ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಇಬ್ಬರು ಶಾಸಕರ ಹೆಸರು ಎಫ್‍ಐಆರ್‍ನಲ್ಲಿ ಉಲ್ಲೇಖಿಸುವ ವರೆಗೆ ನಾವಿಲ್ಲೇ ಕಾಯುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಎಚ್ಚರಿಸಿದ್ದಾರೆ.

ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಹೆಸರು ಎಫ್‍ಐಆರ್‍ನಲ್ಲಿ ಸೇರಿಸದೆ ಇದ್ದರೆ ಮುಂದೆ ಆಗುವುದಕ್ಕೆ ಅವರೇ ಹೊಣೆಗಾರರು. ನಾವು ಜವಾಬ್ದಾರರಲ್ಲ ಎಂದು ತಿಳಿಸಿದರು. ಒಂದು ಗಂಟೆ ಶಾಂತಿಯುತವಾಗಿ ಕಾಯುತ್ತೇವೆ ಎಂದು ಎಸ್ಪಿಯವರಿಗೂ ತಿಳಿಸಿದ್ದಾಗಿ ಹೇಳಿದರು. ಹಿರಿಯ ಪೊಲೀಸ್ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿಯದಿರಿ ಎಂದ ಅವರು, ಒಬ್ಬ ಅಮಾಯಕ ಬಿಜೆಪಿ ಕಾರ್ಯಕರ್ತ ಅಂದರೆ ಅವರು ಮನುಷ್ಯರಲ್ಲವೇ ಎಂದು ಪ್ರಶ್ನಿಸಿದರು.

ತುಘಲಕ್ ದರ್ಬಾರ್ ನಡೆಸುತ್ತಿದ್ದಾರಾ?

ಆಡಳಿತ ಪಕ್ಷದ ಶಾಸಕರ ವೈಫಲ್ಯಗಳನ್ನು ಹೇಳಬಾರದೆಂದರೆ ಇದೇನು ಕಾಂಗ್ರೆಸ್ಸಿನವರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರಾ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಶಾಸಕರು ಏನೆಂದುಕೊಂಡಿದ್ದಾರೆ? ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ವಿಜಯೇಂದ್ರ ಅವರು ನುಡಿದರು.

ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಇದನ್ನು ಹಗುರವಾಗಿ ಪರಿಗಣಿಸದಿರಿ ಎಂದರಲ್ಲದೆ, ಹಿಂದೆ ಗುಲ್ಬರ್ಗದಲ್ಲಿ, ಯಾದಗಿರಿ ಪರಶುರಾಂ ಆತ್ಮಹತ್ಯೆ ಪ್ರಕರಣದಲ್ಲಿ ಏನಾಗಿದೆ? ಎಂದು ಕೇಳಿದರು. ಸಚಿನ್ ಪ್ರಕರಣದಲ್ಲಿ ಏನಾಗಿದೆ? ಅಧಿಕಾರಿ ಚಂದ್ರಶೇಖರ್ ಪ್ರಕರಣದಲ್ಲಿ ಏನಾಗಿದೆ ಎಂಬುದು ರಾಜ್ಯದ ಜನರ ಕಣ್ಮುಂದೆ ಇದೆ ಎಂದು ಗಮನ ಸೆಳೆದರು.

ಬೆಂಗಳೂರಿನಲ್ಲಿ ಎಫ್‍ಐಆರ್‍ನಲ್ಲಿ ಶಾಸಕರ ಹೆಸರನ್ನು ಉಲ್ಲೇಖಿಸದ ಅಯೋಗ್ಯರ ಜವಾಬ್ದಾರಿ ಇದು. ಅವರು ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಅನುಮತಿ ಪಡೆದು ಶಾಸಕರ ಹೆಸರು ಸೇರಿಸಬೇಕು. ಇದು ಅಧಿಕಾರಿಗಳ ಕರ್ತವ್ಯ ಎಂದು ಎಚ್ಚರಿಸಿದರು. ಈ ಕುರಿತು ಎಸ್ಪಿಗೂ ತಿಳಿಸಿದ್ದಾಗಿ ಹೇಳಿದರು. ಗೃಹ ಸಚಿವರೂ ಇದನ್ನು ಗಮನಿಸಬೇಕು ಎಂದು ತಿಳಿಸಿದರು.

ಮುಂದೆ ಆಗುವ ಹೆಚ್ಚು ಕಡಿಮೆಗೆ ನಾವು ಹೊಣೆಗಾರರಲ್ಲ ಎಂದು ಎಸ್ಪಿಯವರಿಗೂ ತಿಳಿಸಿದ್ದಾಗಿ ವಿವರಿಸಿದರು. ಪೊಲೀಸ್ ವ್ಯವಸ್ಥೆಯಿಂದ ಹೀಗಾಗಿದೆ. ಅವರಿಂದ, ಪೊಲೀಸರಿಂದ ಏನು ನ್ಯಾಯ ನಿರೀಕ್ಷಿಸಲು ಸಾಧ್ಯ ಎಂದು ಕೇಳಿದರು.

ಪೊಲೀಸ್ ಠಾಣೆ ಮೂಲಕ ನಮ್ಮ ಹಕ್ಕನ್ನು ಕಿತ್ತುಕೊಳ್ಳುವ ಕೆಲಸ ಆಗುತ್ತಿದೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಅವಕಾಶ ಕೊಡುವುದಿಲ್ಲ ಎಂದರು. ರಾಜ್ಯದ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಂತೆ ವರ್ತಿಸುತ್ತಿವೆ. ಎಲ್ಲದಕ್ಕೂ ಇತಿಮಿತಿ ಇರುತ್ತದೆ ಎಂದು ಅವರು ತಿಳಿಸಿದರು. ವಿನಯ್ ಸೋಮಯ್ಯ ಅವರು ಕಾಂಗ್ರೆಸ್ಸಿನ ಇಬ್ಬರು ಶಾಸಕರು ಹಾಗೂ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಹೆಸರನ್ನೂ ಉಲ್ಲೇಖಿಸಿದ್ದಾರೆ ಎಂದು ಹೇಳಿದರು.

ಇದೆಲ್ಲದರ ನಡುವೆ ನಿನ್ನೆ ಬೆಂಗಳೂರಿನಲ್ಲಿ ನಮ್ಮ ವಿಪಕ್ಷ ನಾಯಕರು ಹೋಗಿದ್ದರೂ ಎಫ್‍ಐಆರ್‍ನಲ್ಲಿ ಶಾಸಕರ ಹೆಸರನ್ನು ಉಲ್ಲೇಖಿಸಿಲ್ಲ; ಇದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು. ಪೊನ್ನಣ್ಣ ಅವರು ರಾಜ್ಯದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು. ಮಂಥರ್ ಗೌಡ ಅವರೂ ಪ್ರಭಾವಿ ಶಾಸಕರು. ಇವರಿಬ್ಬರೂ ಆಡಳಿತ ಪಕ್ಷದವರೇ ಆಗಿದ್ದಾರೆ. ಅವರ ಒತ್ತಡದಿಂದ ನಮ್ಮ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನುಡಿದರು.

ಇವರ ದಬ್ಬಾಳಿಕೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಫ್‍ಐಆರ್‍ನಲ್ಲಿ ಪೊಲೀಸರು ಇವರ ಹೆಸರು ಬಿಟ್ಟಿದ್ದಾರೆ ಎಂದರೆ, ಖಂಡಿತ ನಾವು ಒಪ್ಪುವುದಿಲ್ಲ ಎಂದರು. ಮಡಿಕೇರಿ ಹಾಗೂ ರಾಜ್ಯದಲ್ಲಿ ಸಾಮಾಜಿಕ ಜಾಲತಾಣಗಳ ಆಡ್ಮಿನ್‍ಗಳ ಮೇಲೆ ಎಫ್‍ಐಆರ್ ಹಾಕುತ್ತಿದ್ದಾರೆ. ಅವರ ತೇಜೋವಧೆ ಮಾಡುತ್ತಿದ್ದಾರೆ. ಅವರು ಪೊಲೀಸ್ ಠಾಣೆಗೆ ಅಲೆಯಬೇಕಾಗಿದೆ. ಅವರೇನು ಅಪರಾಧ ಮಾಡಿದ್ದಾರೆ? ಎಂದು ಕೇಳಿದರು.

ಶಾಸಕರ ವೈಫಲ್ಯ, ಆಸ್ಪತ್ರೆ ಶೌಚಾಲಯಗಳನ್ನು ಸರಿಪಡಿಸಬೇಕೆಂಬ ಕಾಳಜಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಅಥವಾ ಮತ್ತೊಬ್ಬ ಕಾರ್ಯಕರ್ತನ ಪೋಸ್ಟನ್ನು ರಿಟ್ವೀಟ್ ಮಾಡಿದ್ದು ಮಹಾ ಅಪರಾಧ ಎಂಬಂತೆ ಅವರ ಮೇಲೆ ಎಫ್‍ಐಆರ್ ರಿಜಿಸ್ಟರ್ ಮಾಡಿ ಅರೆಸ್ಟ್ ಮಾಡುವ ಪ್ರಯತ್ನ ನಡೆದಿದೆ. ತಡೆಯಾಜ್ಞೆ ಇದ್ದರೂ ಇನ್ನೊಂದು ಕೇಸಿನಲ್ಲಿ ಸಿಲುಕಿಸಿ ಬಂಧಿಸುವ ಪ್ರಯತ್ನ ಮಾಡಿದ್ದಾರೆ. ಇದು ಖಂಡಿತ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ವಿನಯ್ ಸೋಮಯ್ಯ ಅವರು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ವಾಟ್ಸ್ ಆಪ್ ಸಂದೇಶ, ಡೆತ್ ನೋಟಿನಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಗಳೇನು? ಯಾವ ರೀತಿ ಚಿತ್ರಹಿಂಸೆ ಆಗಿದೆ? ಮಾನಸಿಕ ಕಿರುಕುಳ ಆಗಿದೆ? ಎಂದು ವಿವರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯ ಶಾಸಕರಾದ ಪೊನ್ನಣ್ಣ, ಮಂಥರ್ ಗೌಡರ ವೈಫಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದೇ ಅಪರಾಧ ಎಂಬಂತೆ ಕಿರುಕುಳ, ಒತ್ತಡ ನೀಡಲಾಗಿದೆ. ವಿನಯ್ ಮೇಲೆ ಎಫ್‍ಐಆರ್ ರಿಜಿಸ್ಟರ್ ಮಾಡಿಸಿದ್ದಾರೆ ಎಂದು ಆಕ್ಷೇಪಿಸಿದರು.

ಹೈಕೋರ್ಟಿನಲ್ಲಿ ತಡೆಯಾಜ್ಞೆ ಇದ್ದು, ಜಾಮೀನು ಪಡೆದಿದ್ದರೂ ಪೊಲೀಸರು ಮನೆ ಬಾಗಿಲಿಗೆ ಹೋಗಿ, ಬೆಂಗಳೂರಿನ ಮನೆಗೂ ಹೋಗಿದ್ದಾರೆ. ಇದರಿಂದ ಮಾನಸಿಕವಾಗಿ ಸಾಕಷ್ಟು ನೊಂದಿದ್ದ ವಿನಯ್ ಸೋಮಯ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login