ಭಾರತೀಯ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬುವಂತೆ ಬಿ.ವೈ. ವಿಜಯೇಂದ್ರ ಮನವಿ


07-05-2025
Press Release

Download Document

7-5-2025

 

ಪ್ರಕಟಣೆಯ ಕೃಪೆಗಾಗಿ

 

ಭಾರತೀಯ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬುವಂತೆ ಮನವಿ

ಮೋದಿಜೀ, ಯೋಧರ ಪರ ಜನಸಂಕಲ್ಪ- ಬಿ.ವೈ. ವಿಜಯೇಂದ್ರ ವಿಶ್ವಾಸ

ಕೋಲಾರ: ಪೆಹಲ್ಗಾಂ ದುರ್ಘಟನೆ ಮೂಲಕ 26 ಜನರ ಸಾವಿಗೆ ಕಾರಣರಾದ ಉಗ್ರರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿಜೀ ಅವರು ಮುಂದಾಗಿದ್ದಾರೆ. ಮೋದಿಜೀ ಮತ್ತು ಭಾರತೀಯ ಯೋಧರ ಜೊತೆ ನಿಲ್ಲುವ ಸಂಕಲ್ಪವನ್ನು ಭಾರತದ ಜನರು ಮತ್ತು ಬಿಜೆಪಿ ಮಾಡಿದೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಸುತ್ತಿರುವ ‘ಜನಾಕ್ರೋಶ ಯಾತ್ರೆ’ ಸಂಬಂಧ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿರುವ ಬಿಜೆಪಿ ಕಾರ್ಯಕರ್ತರು ಮತ್ತು ಎಲ್ಲ ಜನರು ಇವತ್ತು ಮತ್ತು ನಾಳೆ ನಮ್ಮ ಊರಿನ ದೇವಸ್ಥಾನಕ್ಕೆ ತೆರಳಿ ಭಗವಂತನಲ್ಲಿ ಪ್ರಾರ್ಥನೆ ಮಾಡಬೇಕು ಎಂದು ಮನವಿ ಮಾಡಿದರು. ಈ ಮೂಲಕ ನಮ್ಮ ಯೋಧರಿಗೆ ಶಕ್ತಿ ಕೊಡಲಿ. ಮೋದಿಜೀ ಅವರಿಗೆ ಜಗತ್ತಿನ ಎಲ್ಲ ರಾಷ್ಟ್ರಗಳೂ ಇನ್ನಷ್ಟು ಶಕ್ತಿ ತುಂಬಲಿ ಎಂದು ಆಶಿಸಿದರು. ಉಗ್ರರು, ಅವರ ಅಡಗುತಾಣಗಳನ್ನು ಬುಡಸಮೇತ ಕಿತ್ತು ಹಾಕುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥನೆ ಮಾಡುವಂತೆ ಮನವಿ ಮಾಡಿದರು.

ಜನವಿರೋಧಿ, ರೈತ ವಿರೋಧಿ, ಬಡವರ ವಿರೋಧಿ, ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಇವತ್ತಿನಿಂದ ನಾಡಿದ್ದಿನವರೆಗೆ ಹೋರಾಟ ನಡೆಯಬೇಕಿತ್ತು. ಆದರೆ, ಇಡೀ ದೇಶ, ಪ್ರತಿಯೊಬ್ಬ ಭಾರತೀಯರು ನಾವೆಲ್ಲ ಒಂದಾಗಿದ್ದೇವೆ; ಒಗ್ಗೂಡಿದ್ದೇವೆ ಎಂದು ಯೋಧರಿಗೆ ಬೆಂಬಲ ನೀಡಬೇಕಿದೆ. ಕಾಂಗ್ರೆಸ್ ಸೇರಿ ದೇಶದ ಎಲ್ಲ ರಾಜಕೀಯ ಪಕ್ಷಗಳೂ ಒಗ್ಗೂಡಿ ಇರುವ ಸಂದೇಶವನ್ನು ಜಗತ್ತಿಗೆ ಕೊಡಬೇಕಿದೆ ಎಂದು ತಿಳಿಸಿದರು.

ಪಾಕಿಸ್ತಾನ ಮುಂದಿನ ದಿನಗಳಲ್ಲಿ ಭಾರತದ ಕಡೆ ತಿರುಗಿ ನೋಡಬಾರದು; ಅಲ್ಲಿನ ಉಗ್ರರು ಮತ್ತೆ ಉಸಿರೆತ್ತಬಾರದು; ಆ ನಿಟ್ಟಿನಲ್ಲಿ ನಮ್ಮ ಬೆಂಬಲ ಕೊಡಬೇಕಾಗಿದೆ ಎಂದು ತಿಳಿಸಿದರು. ಬಿಜೆಪಿಗೆ ದೇಶ ಮೊದಲು ಎಂದು ಅವರು ಹೇಳಿದರು. ಯೋಧರಿಗೆ ನೈತಿಕ ಸ್ಥೈರ್ಯ ತುಂಬುವಂತೆ ಮನವಿ ಮಾಡಿದರು.

ಬಿಜೆಪಿಯ ಸಂಸ್ಥಾಪಕರಲ್ಲಿ ಒಬ್ಬರಾದ ಶ್ಯಾಮಪ್ರಸಾದ ಮುಖರ್ಜಿ ಅವರು, ಏಕ್ ದೇಶ್ ಮೇ ದೋ ನಿಶಾನ್, ದೋ ಪ್ರಧಾನ್ ನಹಿ ಚಲೇಗಾ ಎನ್ನುತ್ತಿದ್ದರು. ಜಮ್ಮು ಕಾಶ್ಮೀರದಲ್ಲಿ ಭಾರತದ ಧ್ವಜ ಹಾರಬೇಕೆಂಬುದು ಅವರ ಪ್ರಬಲ ಆಕಾಂಕ್ಷೆಯಾಗಿತ್ತು. ಅದೇ ಆಶಯ ಹೊತ್ತಿದ್ದ ಅವರು ದೇಶಕ್ಕಾಗಿ ಬಲಿದಾನ ಮಾಡಿದ್ದರು. ಇವತ್ತು ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರು ಶಪಥ ಮಾಡಿದ್ದಾರೆ. ಇಂಥ ಉಗ್ರರ ಚಟುವಟಿಕೆಗಳಿಗೆ ಅಂತ್ಯ ಹಾಡಲು ಅವರು ಮುಂದಾಗಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಮಾಜಿ ಸಚಿವ ಬಿ. ಶ್ರೀರಾಮುಲು, ಮಾಜಿ ಸಂಸದ ಎಸ್. ಮುನಿಸ್ವಾಮಿ, ಜಿಲ್ಲಾಧ್ಯಕ್ಷ ಓಂ ಶಕ್ತಿ ಛಲಪತಿ, ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ಬಿ.ಪಿ. ವೆಂಕಟಪ್ಪ, ವೈ. ಸಂಪಂಗಿ, ರಾಜ್ಯ ಕಾರ್ಯದರ್ಶಿಗಳಾದ ಸಿ. ಮುನಿರಾಜು, ತಮ್ಮೇಶ್ ಗೌಡ, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಹರೀಶ್ ಪೂಂಜಾ, ಮಾಜಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login