
10-3-2025
ಪ್ರಕಟಣೆಯ ಕೃಪೆಗಾಗಿ
ಹವಾಲಾ ನಿರತರು, ಮಾಫಿಯಗಳು, ರಾಜಕಾರಣಿಗಳ ವಿವರ ನೀಡಲು ಒತ್ತಾಯ
ರನ್ಯಾರಾವ್ ಚಿನ್ನ ಸ್ಮಗ್ಲಿಂಗ್ ಹಿಂದಿರುವ ಸಚಿವರ ಮಾಹಿತಿ ನೀಡಲು ಸಿಎಂಗೆ ವಿಜಯೇಂದ್ರ ಆಗ್ರಹ
ಬೆಂಗಳೂರು: ರನ್ಯಾರಾವ್ ಚಿನ್ನ ಸ್ಮಗ್ಲಿಂಗ್ ಹಿಂದೆ ಕೆಲವು ಸಚಿವರು ಇರುವ ಮಾಹಿತಿ ಇದ್ದು, ಅಂಥ ಸಚಿವರ ಹೆಸರನ್ನು ಬಹಿರಂಗಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚಿನ್ನ ಕಳ್ಳಸಾಗಣೆ ಹಿನ್ನೆಲೆಯಲ್ಲಿ ಬಂಧಿತರಾದ ರನ್ಯಾರಾವ್ ಹಿಂದೆ ಅನೇಕ ಘಟಾನುಘಟಿಗಳಿದ್ದಾರೆ ಎಂಬ ಅಂಶ ಹೊರಕ್ಕೆ ಬರುತ್ತಿದೆ. ಇದೇನೂ ಸಣ್ಣ ಘಟನೆಯಲ್ಲ; ರನ್ಯಾರಾವ್ ಕಳೆದ ಕೆಲವು ತಿಂಗಳುಗಳಲ್ಲಿ 30ಕ್ಕೂ ಹೆಚ್ಚು ಬಾರಿ ವಿದೇಶಕ್ಕೆ- ದುಬೈಗೆ ಬೇರೆ ಬೇರೆ ದೇಶಗಳಿಗೆ ಹೋಗಿ ಬಂದ ಮಾಹಿತಿ ಹೊರಬಿದ್ದಿದೆ. ಪ್ರತಿ ಬಾರಿಯೂ ಬೆಂಗಳೂರಿಗೆ ಮರಳಿ ಬಂದಾಗ ಸಂಪೂರ್ಣವಾದ ಪ್ರೊಟೊಕಾಲ್ ವ್ಯವಸ್ಥೆ ನೀಡುತ್ತಿದ್ದರು ಎಂದು ಆರೋಪಿಸಿದರು.
ರನ್ಯಾರಾವ್ ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯ ಮಗಳು. ಏರ್‍ಪೋರ್ಟಿಗೆ ವಾಪಸ್ ಬಂದಾಗ ವಿಮಾನನಿಲ್ದಾಣದಿಂದ ಪೊಲೀಸರೇ ಎಸ್ಕಾರ್ಟ್ ನೀಡಿ ಕರೆದೊಯ್ಯುತ್ತಿದ್ದರು; ಆಕೆ ಸಾಮಾನ್ಯ ಮಹಿಳೆ ಅಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ತಿಳಿಸಿದರು.
ಕೆಂಪೇಗೌಡ ಏರ್‍ಪೋರ್ಟಿನಲ್ಲಿ ಪ್ರೊಟೊಕಾಲ್ ಸಿಗುತ್ತದೆ; ಸೆಕ್ಯುರಿಟಿ ತಪಾಸಣೆ ಆಗುವುದಿಲ್ಲ ಎಂದಾದರೆ, ಇದರ ಹಿಂದೆ ಕೆಲವು ಘಟಾನುಘಟಿಗಳಿದ್ದಾರೆ; ಅಲ್ಲದೇ ಕೆಲವು ಸಚಿವರಿದ್ದಾರೆ ಎಂಬುದು ಕೂಡ ಹೊರಕ್ಕೆ ಬರುತ್ತಿದೆ ಎಂದು ತಿಳಿಸಿದರು. ಈಗಾಗಲೇ ಸಿಬಿಐ, ಇ.ಡಿ. ತನಿಖೆ ನಡೆಯುತ್ತಿದೆ ಎಂದರು. ಈ ಗಂಭೀರ ಪ್ರಕರಣದ ಹಿಂದಿರುವವರ ಮಾಹಿತಿ ಮುಖ್ಯಮಂತ್ರಿಗಳಿಗೆ ಇದ್ದೇ ಇರುತ್ತದೆ ಎಂದು ನುಡಿದರು.
ಸ್ಮಗ್ಲಿಂಗ್ ಹಿಂದೆ ಇರುವ ಹವಾಲಾ ನಿರತರು, ಚಿನ್ನದ ಕಳ್ಳಸಾಗಾಟದ ಮಾಫಿಯಾಗಳು, ಇಂಥ ವ್ಯಕ್ತಿಗಳಿಗೆ ಬೆಂಬಲ ಕೊಟ್ಟ ರಾಜಕಾರಣಿಗಳು, ಮಂತ್ರಿಗಳು, ಮಾಜಿ ಮಂತ್ರಿಗಳು, ಶಾಸಕರು, ಮಾಜಿ ಶಾಸಕರು ಯಾರೆಂಬುದನ್ನು ಸಿಎಂ ಅವರು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು. ಮೊನ್ನೆ 13 ಕೋಟಿಯ ಮೌಲ್ಯದ ಚಿನ್ನ ಕಳ್ಳಸಾಗಾಟದಲ್ಲಿ ರನ್ಯಾರಾವ್ ಬಂಧನವಾಗಿದ್ದು, ಚಿನ್ನ ವಶಕ್ಕೆ ಪಡೆದಿದ್ದಾರೆ. ಇದರ ಹಿಂದಿರುವ ಸಚಿವರ ಹೆಸರು ಬಹಿರಂಗಪಡಿಸಿ ಎಂದು ಅವರು ಒತ್ತಾಯವನ್ನು ಮುಂದಿಟ್ಟರು.
ಒಬ್ಬ ಹಿರಿಯ ಐಪಿಎಸ್ ಪೊಲೀಸ್ ಅಧಿಕಾರಿ ಮಗಳ ನೇತೃತ್ವದಲ್ಲಿ ಇಷ್ಟು ದೊಡ್ಡ ಚಿನ್ನ ಕಳ್ಳಸಾಗಾಟ ನಡೆದುದನ್ನು ನಾವೆಂದೂ ಕೇಳಿರಲಿಲ್ಲ; ಇದು ಗಂಭೀರ ಸ್ವರೂಪ ಪಡೆದುಕೊಂಡಿದೆ. ಇಲ್ಲಿ ಶಕ್ತಿಶಾಲಿ ಮುಖ್ಯಮಂತ್ರಿ ಇದ್ದು, ಅವರಿಗೆ ಪ್ರಕರಣದ ಮಾಹಿತಿ ಇರುತ್ತದೆ. ಅವರು ಅದನ್ನು ಬಹಿರಂಗಪಡಿಸಲಿ ಎಂದು ಅವರು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು. ಇದು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸವೂ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
To Write Comment Please Login