ಕಾಂಗ್ರೆಸ್ ಪಕ್ಷವು ಸುಡುವ ಮನೆ ಎಂದಿದ್ದ ಡಾ.ಅಂಬೇಡ್ಕರ್: ಪಿ.ರಾಜೀವ್


09-04-2025
Press Release

Download Document

9-4-2025

 

ಪ್ರಕಟಣೆಯ ಕೃಪೆಗಾಗಿ

 

ಡಾ. ಅಂಬೇಡ್ಕರರ ಜಯಂತಿಯ ಅಂಗವಾಗಿ ಸಭೆ, ಗೋಷ್ಠಿಗಳು..

ಕಾಂಗ್ರೆಸ್ ಪಕ್ಷವು ಸುಡುವ ಮನೆ ಎಂದಿದ್ದ ಡಾ.ಅಂಬೇಡ್ಕರ್: ಪಿ.ರಾಜೀವ್

ಬೆಂಗಳೂರು: ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರು 1948ರ ಏಪ್ರಿಲ್ 25ರಂದು ಒಂದು ಐತಿಹಾಸಿಕ ಹೇಳಿಕೆ ನೀಡಿದ್ದರು. ಇಡೀ ದೇಶದ ಶೋಷಿತ ಸಮುದಾಯವನ್ನು ಉದ್ದೇಶಿಸಿ ಈ ಹೇಳಿಕೆ ಇತ್ತು. ಕಾಂಗ್ರೆಸ್ ಪಕ್ಷವು ಸುಡುವ ಮನೆ. ಯಾರೆಲ್ಲ ಕಾಂಗ್ರೆಸ್ಸಿಗೆ ಹೋಗುತ್ತಾರೋ ಅವರೆಲ್ಲ ಸುಟ್ಟು ಹೋಗುತ್ತಾರೆ. ಹಾಗಾಗಿ ಕಾಂಗ್ರೆಸ್ ಬಿಟ್ಟು ಬನ್ನಿ ಎಂದಿದ್ದರು ಎಂಬುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ಲಕ್ನೋದಲ್ಲಿ ಈ ಹೇಳಿಕೆ ಕೊಟ್ಟಿದ್ದರು. 1948ರಲ್ಲಿ ಈ ದೇಶ ಸ್ವತಂತ್ರವಾಗಿತ್ತು. ಮಧ್ಯಂತರ ಸರಕಾರದಲ್ಲಿ ಅಂಬೇಡ್ಕರ್ ಅವರು ಸಚಿವರೂ ಆಗಿದ್ದರು. ಸಂವಿಧಾನ ರಚನಾ ಪ್ರಕ್ರಿಯೆ ಏನು ನಡೆದಿತ್ತೋ ಕರಡು ಸಿದ್ಧತಾ ಸಮಿತಿಯ ಅಧ್ಯಕ್ಷರೂ ಆಗಿದ್ದರು ಎಂದು ಗಮನ ಸೆಳೆದರು. ಇಂಥ ಸಂದರ್ಭದಲ್ಲಿ ಈ ಹೇಳಿಕೆ ಕೊಟ್ಟಿದ್ದು, ಇದು ಆತುರದ ಅಥವಾ ನಿರ್ಲಕ್ಷ್ಯದ ಹೇಳಿಕೆ ಅಲ್ಲ. ಇದು ಪ್ರಜ್ಞಾಪೂರ್ವಕ, ಚಿಂತನೆಯಿಂದ ನೀಡಿದ ಹೇಳಿಕೆ ಎಂದು ವಿಶ್ಲೇಷಿಸಿದರು.

ಕಾಂಗ್ರೆಸ್ ಪಕ್ಷವು ಅಂಬೇಡ್ಕರರಿಗೆ ಮತ್ತು ದಲಿತರಿಗೆ ನಿರಂತರವಾಗಿ ಮೋಸ ಮಾಡಿತ್ತು. ದಲಿತರನ್ನು ಅವತ್ತು ಮತಬ್ಯಾಂಕ್ ಆಗಿ ಬಳಸಿಕೊಂಡು, ಅದೇ ಚಾಳಿಯನ್ನು ಇವತ್ತಿಗೂ ಮುಂದುವರೆಸಿದೆ ಎಂದು ಆರೋಪಿಸಿದರು. ದಲಿತ ಸಮುದಾಯ ಮತ್ತು ಅಂಬೇಡ್ಕರರಿಗೆ ಕಾಂಗ್ರೆಸ್ ಮಾಡಿದ ಅನ್ಯಾಯದ ಕುರಿತು ಜಾಗೃತಿ ಮೂಡಿಸಲಿದ್ದೇವೆ ಎಂದರು.

ಡಾ. ಅಂಬೇಡ್ಕರರ ಜಯಂತಿಯನ್ನು ಬಿಜೆಪಿ ಅಭಿಯಾನದ ರೀತಿಯಲ್ಲಿ ಕೈಗೊಳ್ಳಲಿದೆ. ರಾಜ್ಯ ಸೇರಿದಂತೆ ಇಡೀ ದೇಶಾದ್ಯಂತ ಏ.13ರಿಂದ 25ರವರೆಗೆ ಅಂಬೇಡ್ಕರ್ ಅವರ ಕುರಿತ ಚಿಂತನೆಗಳು, ಗೋಷ್ಠಿಗಳು, ಸಭೆಗಳನ್ನು ಆಯೋಜಿಸಲಿದ್ದೇವೆ ಎಂದು ಪ್ರಕಟಿಸಿದರು. ಕಾಂಗ್ರೆಸ್ ಪಕ್ಷವು ಅಂಬೇಡ್ಕರರಿಗೆ ಮಾಡಿರುವ ಅನ್ಯಾಯವನ್ನು ತಿಳಿಸಿಕೊಡುವ ಸಿದ್ಧತೆಯನ್ನು ಬಿಜೆಪಿ ಮಾಡಿದೆ ಎಂದು ತಿಳಿಸಿದರು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login