
11-4-2025
ಪ್ರಕಟಣೆಯ ಕೃಪೆಗಾಗಿ
ಕಾಂಗ್ರೆಸ್ಸಿಗೆ ಡಾ.ಬಾಬಾಸಾಹೇಬ ಅಂಬೇಡ್ಕರರ ಬಗ್ಗೆ ಅತ್ಯಂತ ತಿರಸ್ಕಾರದ ಭಾವನೆ: ಪ್ರಲ್ಹಾದ್ ಜೋಶಿ
ಬೆಂಗಳೂರು: ಕಾಂಗ್ರೆಸ್ ಪಕ್ಷವು ದುರಹಂಕಾರ ಹೊಂದಿದ್ದು, ಡಾ. ಬಾಬಾಸಾಹೇಬ ಅಂಬೇಡ್ಕರರ ಬಗ್ಗೆ ಅತ್ಯಂತ ತಿರಸ್ಕಾರದ ಭಾವನೆ ಇದೆ ಎಂಬುದು ಗೊತ್ತಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಟೀಕಿಸಿದ್ದಾರೆ.
ನಿಪ್ಪಾಣಿಗೆ ತೆರಳುವ ಭೀಮ ಹೆಜ್ಜೆ 100ರ ಸಂಭ್ರಮ ರಥದ ಉದ್ಘಾಟನೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ಮಹಾತ್ಮ ಗಾಂಧಿಯವರು ಬೆಳಗಾವಿಗೆ ಬಂದು 100 ವರ್ಷಗಳಾದ ಕಾರ್ಯಕ್ರಮವನ್ನು ಅಂದರೆ ಒರಿಜಿನಲ್ ಗಾಂಧಿಯವರು ಬಂದು ಹೋದುದನ್ನು ನಕಲಿ ಗಾಂಧಿಗಳು ಸೇರಿ ತಮ್ಮ ಕಾರ್ಯಕ್ರಮ ಮಾಡಿಕೊಂಡರು ಎಂದು ಆಕ್ಷೇಪಿಸಿದರು. ಈಗ ಇರುವುದು ಕಾಂಗ್ರೆಸ್ ಐ ಪಕ್ಷ. ಆಗ ರಾಷ್ಟ್ರಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಒರಿಜಿನಲ್ ಕಾಂಗ್ರೆಸ್ ಪಕ್ಷ ಎಂದು ವಿವರಿಸಿದರು.
ಡಾ. ಬಾಬಾಸಾಹೇಬ ಅಂಬೇಡ್ಕರರು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಬಂದು 100 ವರ್ಷಗಳಾಗಿವೆ. ಆದರೆ, ದಲಿತರ ಹೆಸರಿನಲ್ಲಿ ಮತ ತೆಗೆದುಕೊಳ್ಳುವ ಕಾಂಗ್ರೆಸ್ಸಿನ ಒಬ್ಬರೇ ಒಬ್ಬ ನಾಯಕರೂ ಕೂಡ ಮಾತನಾಡಿಲ್ಲ. ಎಲ್ಲ ಪಕ್ಷಗಳ ಸಮಿತಿ ರಚಿಸಿ, ಎಲ್ಲ ದಲಿತ ಮುಖಂಡರನ್ನು ಸೇರಿಸಿ, ದಲಿತ ಚಿಂತಕರನ್ನು ಕರೆದು ಎರಡು ದಿನಗಳ ಕಾರ್ಯಕ್ರಮ ಮಾಡಲು ಇವರಿಗೆ ಏನಾಗಿತ್ತು ಎಂದು ಕೇಳಿದರು.
ಡಾ. ಬಾಬಾಸಾಹೇಬ ಅಂಬೇಡ್ಕರರನ್ನು ಮರೆಯಬೇಕು ಎಂಬ ದುರುದ್ದೇಶ ಇದರ ಹಿಂದಿದೆ. ಅವರನ್ನು 2 ಬಾರಿ ಸೋಲಿಸಿದ್ದರು. ಅವರ ವಿರುದ್ಧ ಸ್ಪರ್ಧಿಸಿ ಗೆದ್ದ ಕಾರಜೋಳ್ಕರ್ ಅವರಿಗೆ ಪದ್ಮವಿಭೂಷಣ ನೀಡಿದ್ದಾರೆ. ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಸರಕಾರ ಬರುವವರೆಗೆ ಅಂಬೇಡ್ಕರರಿಗೆ ಭಾರತರತ್ನ ಕೊಡದೆ ಇರುವುದು ಅವರಿಗೆ ಮಾಡಿದ ಅವಮಾನ ಎಂದು ನುಡಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಒತ್ತಾಯದಿಂದ ಅಂಬೇಡ್ಕರರ ತೈಲಚಿತ್ರವನ್ನು ಸಂಸತ್ತಿನಲ್ಲಿ ವಿ.ಪಿ.ಸಿಂಗ್ ಸರಕಾರ ಅನಾವರಣ ಮಾಡಿದೆ. ಆದರೆ, ಕಾಂಗ್ರೆಸ್ ಸರಕಾರ ಹೇಗೆ ನಡೆದುಕೊಂಡಿದೆ ಎಂದು ಪ್ರಶ್ನಿಸಿದ ಅವರು, ಅಂಬೇಡ್ಕರರನ್ನು ಚುನಾವಣೆಯಲ್ಲಿ ಸೋಲಿಸಲು ನೆಹರೂ ಅವರು ಎರಡು ಬಾರಿ ಪ್ರಚಾರ ಭಾಷಣಕ್ಕೆ ತೆರಳಿದ್ದರು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಡಾ. ಬಾಬಾಸಾಹೇಬ ಅಂಬೇಡ್ಕರರಿಗೆ ಅಪಮಾನ, ನಿರ್ಲಕ್ಷ್ಯ ಮಾಡಿತ್ತು. ಅವರನ್ನು ಚುನಾವಣೆಯಲ್ಲಿ ಸೋಲಿಸಿತ್ತು. ಈ ಎಲ್ಲ ಸಂಗತಿಗಳನ್ನು ನಾವು ಬಾರಿ ಬಾರಿ ಹೇಳಿದ್ದೇವೆ. ಲೋಕಸಭಾ ಚರ್ಚೆಯಲ್ಲೂ ಗಮನ ಸೆಳೆದಿದ್ದೇವೆ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ಪಿ.ಸಿ. ಮೋಹನ್, ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಶಾಸಕ ಮಹೇಶ್ ಟೆಂಗಿನಕಾಯಿ, ಮಾಜಿ ಸಂಸದ ಎಸ್. ಮುನಿಸ್ವಾಮಿ, ಮಾಜಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ಶಾಸಕ ಸಿಮೆಂಟ್ ಮಂಜುನಾಥ್, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ವೈ. ಸಂಪಂಗಿ, ಮುಖಂಡ ಅನಿಲ್ ಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ದಲಿತ ಮುಖಂಡ ವೆಂಕಟಸ್ವಾಮಿ, ಮಾಜಿ ಮೇಯರ್ ಎಂ. ಗೌತಮ್ ಕುಮಾರ್, ಭೀಮ ಹೆಜ್ಜೆ ರಾಜ್ಯ ಸಂಚಾಲಕ ಮತ್ತು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ಭೀಮ ಹೆಜ್ಜೆ ರಾಜ್ಯ ಸಹ-ಸಂಚಾಲಕ ಮತ್ತು ಎಸ್.ಸಿ. ಮೋರ್ಚಾ ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಜಿ. ಪ್ರಶಾಂತ್, ರಾಜ್ಯ ವಕ್ತಾರ ವೆಂಕಟೇಶ ದೊಡ್ಡೇರಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
To Write Comment Please Login