ಮುಖ್ಯಮಂತ್ರಿಗಳ ಹಿಂದೂ ವಿರೋಧಿ ನೀತಿಗೆ ಆಕ್ಷೇಪ ಕಾಂಗ್ರೆಸ್ ಸರಕಾರವು ಜನರ ಪಾಲಿಗೆ ಬದುಕಿದ್ದೂ ಸತ್ತಂತಿದೆ: ಬಿ.ವೈ.ವಿಜಯೇಂದ್ರ


21-04-2025
Press Release

Download Document

21-4-2025

ಪ್ರಕಟಣೆಯ ಕೃಪೆಗಾಗಿ

 

ಮುಖ್ಯಮಂತ್ರಿಗಳ ಹಿಂದೂ ವಿರೋಧಿ ನೀತಿಗೆ ಆಕ್ಷೇಪ

ಕಾಂಗ್ರೆಸ್ ಸರಕಾರವು ಜನರ ಪಾಲಿಗೆ ಬದುಕಿದ್ದೂ ಸತ್ತಂತಿದೆ: ಬಿ.ವೈ.ವಿಜಯೇಂದ್ರ

 

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಜನರ ಪಾಲಿಗೆ ಬದುಕಿದ್ದೂ ಸತ್ತಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.

ಜನಾಕ್ರೋಶ ಯಾತ್ರೆ ಸಂಬಂಧ ಇಲ್ಲಿ ಏರ್ಪಡಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ಈ ಸರಕಾರ ಬಂದ ಮೇಲೆ ಬೆಲೆ ಏರಿಕೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಬೆಲೆ ಏರಿಕೆ ಪರಿಣಾಮವಾಗಿ ಬಡಜನರು ತತ್ತರಿಸಿ ಹೋಗಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ; ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಪರಿಸ್ಥಿತಿ ಇದೆ ಎಂದು ಆರೋಪಿಸಿದರು.

ಅಭಿವೃದ್ಧಿ ಆಗುತ್ತಿಲ್ಲ; ಒಂದು ತೊಟ್ಟು ವಿಷ ಕೊಡಿ; ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಬಿಜೆಪಿ ಶಾಸಕರು ಹೇಳುತ್ತಿಲ್ಲ. ಆಡಳಿತ ಪಕ್ಷದ ಹಿರಿಯ ಶಾಸಕ ರಾಜು ಕಾಗೆಯವರು ಹೇಳುತ್ತಿದ್ದಾರೆ. ಬಿ.ಆರ್.ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಆರ್.ವಿ.ದೇಶಪಾಂಡೆ ಅವರಂಥ ಹಿರಿಯ ಶಾಸಕರೂ ಅಭಿವೃದ್ಧಿಗೆ ಹಣ ಕೊಡಲು ಸಾಧ್ಯ ಆಗುತ್ತಿಲ್ಲ. ಗ್ಯಾರಂಟಿಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗುತ್ತಿಲ್ಲ ಎಂದು ಹೇಳಿದ್ದಾಗಿ ಗಮನ ಸೆಳೆದರು.

ಸಿದ್ದರಾಮಯ್ಯನವರು ಕೇವಲ ಮುಸಲ್ಮಾನರ ಮುಖ್ಯಮಂತ್ರಿಯಂತೆ ವರ್ತಿಸುತ್ತಿದ್ದಾರೆ. ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಅದಕ್ಕಾಗಿ ಜನಾಕ್ರೋಶ ಯಾತ್ರೆ ಮಾಡುತ್ತಿರುವುದಾಗಿ ವಿವರಿಸಿದರು. ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿಗರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಸಮುದಾಯಗಳನ್ನು ಮರೆತು ಕೇವಲ ಅಲ್ಪಸಂಖ್ಯಾತರ ಹಿಂದೆ ಹೊರಟಿದ್ದಾರೆ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಸಾವಿರಾರು ಕೋಟಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇದು ಖಂಡನೀಯ ಎಂದು ತಿಳಿಸಿದರು.

50ಕ್ಕೂ ಜನೋಪಯೋಗಿ ವಸ್ತುಗಳ ಬೆಲೆ ಏರಿಸಿದ್ದಾರೆ. ಪೆಟ್ರೋಲ್ ಬೆಲೆ 3.50 ರೂ. ಏರಿಸಿದ್ದರೆ ತೆರಿಗೆ ಮೂಲಕ ಡೀಸೆಲ್ ಬೆಲೆ 5.50 ರೂ. ಹೆಚ್ಚಿಸಿದ್ದಾರೆ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದಾರೆ. ಹಾಲಿನ ಬೆಲೆ 9 ರೂ. ಜಾಸ್ತಿ ಮಾಡಿದ್ದಾರೆ. ಬೆಲೆ ಏರಿಕೆಯಿಂದ ಜನರು ಪರದಾಡುವಂತಾಗಿದೆ. ರೈತರೂ ತೊಂದರೆಗೆ ಸಿಲುಕಿದ್ದಾರೆ ಎಂದು ವಿವರಿಸಿದರು. ಈ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಬಂದ ಕಾರ್ಯಕರ್ತರು ಮತ್ತು ಮುಖಂಡರ ಪ್ರೀತಿ ವಿಶ್ವಾಸಕ್ಕೆ ಋಣಿ ಆಗಿರುವುದಾಗಿ ಇದೇವೇಳೆ ತಿಳಿಸಿದರು.

ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ್ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ವಿರುಪಾಕ್ಷಪ್ಪ, ಮಾಜಿ ಮುಖ್ಯ ಸಚೇತಕ ಎ.ಹೆಚ್. ಶಿವಯೋಗಿಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಜಿಲ್ಲಾಧ್ಯಕ್ಷ ಎನ್. ರಾಜಶೇಖರ, ಮಾಜಿ ಶಾಸಕ ವೈ. ಸಂಪಂಗಿ, ರಾಜೇಶ್ ಕುಮಾರ್, ಮುಖಂಡ ಮಾಡಾಳ್ ಮಲಿಕಾರ್ಜುನ್, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

 

 

 

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login