
21-4-2025
ಪ್ರಕಟಣೆಯ ಕೃಪೆಗಾಗಿ
ರಾಜ್ಯದಲ್ಲಿ ರೈತ ವಿರೋಧಿ, ಬಡವರ ವಿರೋಧಿ ಸರಕಾರ- ವಿಜಯೇಂದ್ರ
ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಬೆಲೆ ಏರಿಕೆಯ ಗ್ಯಾರಂಟಿಯನ್ನು ಜನರಿಗೆ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಇಂದು ಇಲ್ಲಿ ಜನಾಕ್ರೋಶ ಯಾತ್ರೆ ಸಂಬಂಧ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, 50ಕ್ಕೂ ಹೆಚ್ಚು ದಿನಬಳಕೆಯ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದ ಸರಕಾರ ಸಿದ್ದರಾಮಯ್ಯನವರದು ಎಂದು ಟೀಕಿಸಿದರು.
ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮತ್ತು ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 38,500 ಕೋಟಿ ರೂಪಾಯಿಗಳನ್ನು ಸಿದ್ದರಾಮಯ್ಯನವರ ಸರಕಾರ ದುರ್ಬಳಕೆ ಮಾಡಿದೆ ಎಂದು ಆರೋಪಿಸಿದರು. ಕರ್ನಾಟಕ ರಾಜ್ಯದಲ್ಲಿ ಇರುವುದು ಜನಪರ ಸರಕಾರ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಬಡವರ, ರೈತರ, ಜನಸಾಮಾನ್ಯರ ಪರವಾದ ಸರಕಾರ ಅಲ್ಲ. ಈ ಸರಕಾರ ರೈತ ವಿರೋಧಿ ಹಾಗೂ ಬಡವರ ವಿರೋಧಿ ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕರಿಂದ ಸರಕಾರ ಉರುಳಿಸುವ ಕಾರ್ಯ
ಕಾಂಗ್ರೆಸ್ ಮುಖಂಡರು ಕಿತ್ತಾಡಿದರೆ ಬಿಜೆಪಿಯವರು, ಅಮಿತ್ ಶಾ ಅವರು ಈ ಸರಕಾರವನ್ನು ಉರುಳಿಸಿಬಿಡುತ್ತಾರೆ ಎಂದು ಮಲ್ಲಿಕಾರ್ಜುನ ಖರ್ಗೆಯವರು ಕಿವಿಮಾತು ಹೇಳಿದ್ದಾರೆ ಎಂದು ತಿಳಿಸಿದ ಅವರು, ಖರ್ಗೆಯವರೇ, ನಿಮ್ಮ ಕಾಂಗ್ರೆಸ್ ಪಕ್ಷದ ಶಾಸಕರೇ ಸರಕಾರ ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಸಿದ್ದರಾಮಯ್ಯನವರು ಕಳೆದೆರಡು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡುತ್ತಿಲ್ಲ ಎಂದು ಬಿ.ವೈ. ವಿಜಯೇಂದ್ರ ಅವರು ಗಮನ ಸೆಳೆದರು.
ಸಿದ್ದರಾಮಯ್ಯನವರು ಕಳೆದ 20 ತಿಂಗಳಿಂದ ಅಭಿವೃದ್ಧಿ ಕಾರ್ಯಕ್ಕೆ ಹಣ ನೀಡಿಲ್ಲ; ಗ್ಯಾರಂಟಿಗೆ ಹಣ ಹೊಂದಿಸಲು ಕಷ್ಟವಾಗಿದೆ ಎಂದು ಕಾಂಗ್ರೆಸ್ಸಿನ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಅದೇ ಪಕ್ಷದ ಹಿರಿಯ ಶಾಸಕ ರಾಜು ಕಾಗೆಯವರು ಅಭಿವೃದ್ಧಿ ಕಾರ್ಯಕ್ಕೆ ಹಣ ಇಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿರುವುದಾಗಿ ವಿವರಿಸಿದರು.
ಕರ್ನಾಟಕ ರಾಜ್ಯದಲ್ಲಿ ಇರುವುದು ಜನಪ್ರಿಯ ಸರಕಾರವಲ್ಲ; ಇದು ಜಾಹೀರಾತಿನ ಸರಕಾರ ಎಂದು ಟೀಕಿಸಿದರು. ಇಂಥ ಜನವಿರೋಧಿ ಸರಕಾರದ ನಿಜ ಬಣ್ಣ ಬಯಲು ಮಾಡಿ, ಜನಜಾಗೃತಿ ಮೂಡಿಸಲು ಬಿಜೆಪಿ ಜನಾಕ್ರೋಶ ಯಾತ್ರೆ ಮಾಡುತ್ತಿದೆ ಎಂದು ವಿವರಿಸಿದರು.
ಹಿಂದೆ ಯಡಿಯೂರಪ್ಪ ಅವರು ಬಿಜೆಪಿ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕವು ಅಭಿವೃದ್ಧಿ ವಿಷಯದಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿತ್ತು. ಅದೇ ಕರ್ನಾಟಕವು ಈಗ ಇಡೀ ದೇಶದಲ್ಲಿ ಮೊದಲ ಸ್ಥಾನಕ್ಕೆ ಬಂದಿದೆ. ಅದು ಅಭಿವೃದ್ಧಿ ವಿಚಾರಕ್ಕೆ ಅಲ್ಲ; ಭ್ರಷ್ಟಾಚಾರದಲ್ಲಿ ಎಂದು ವ್ಯಂಗ್ಯವಾಗಿ ನುಡಿದರು. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಇದನ್ನು ಹೇಳಿದ್ದಾಗಿ ವಿವರಿಸಿದರು.
ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಮಾಜಿ ಸಚಿವ ಬಿ.ಸಿ. ಪಾಟೀಲ್, ಮುಖಂಡ ಭರತ್ ಬೊಮ್ಮಾಯಿ, ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪೂಜಾರ್, ಮಾಜಿ ಶಾಸಕ ಶಿವರಾಜ್ ಸಜ್ಜನ್, ವಿರುಪಾಕ್ಷಪ್ಪ ಬಳ್ಳಾರಿ, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಮಂಡಲ ಅಧ್ಯಕ್ಷರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
To Write Comment Please Login