ವಕ್ಫ್ ಬೋರ್ಡ್ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರಿಂದ ಜಮೀನು ಲೂಟಿ ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭಾ ಅಂಗೀಕಾರ ಐತಿಹಾಸಿಕ ಕ್ಷಣ: ವಿಜಯೇಂದ್ರ


03-04-2025
Press Release

Download Document

3-4-2025

ಪ್ರಕಟಣೆಯ ಕೃಪೆಗಾಗಿ

 

ವಕ್ಫ್ ಬೋರ್ಡ್ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರಿಂದ ಜಮೀನು ಲೂಟಿ

 

ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭಾ ಅಂಗೀಕಾರ ಐತಿಹಾಸಿಕ ಕ್ಷಣ: ವಿಜಯೇಂದ್ರ

 

ಬೆಂಗಳೂರು: ಲೋಕಸಭೆಯಲ್ಲಿ ನಿನ್ನೆ ಒಂದು ಐತಿಹಾಸಿಕ ಮಸೂದೆಗೆ ಅಂಗೀಕಾರ ಲಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ  ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇಂದು ಬಿಜೆಪಿಯ ಅಹೋರಾತ್ರಿ ಧರಣಿ ಮುಂದುವರೆಯಿತು. ಕಾಂಗ್ರೆಸ್ ಪಕ್ಷ ವಕ್ಫ್ ಕಾಯಿದೆಗೆ ತಿದ್ದುಪಡಿಯನ್ನು ರಾಜ್ಯ- ದೇಶದಲ್ಲಿ ವಿರೋಧಿಸುವುದು ಒಂದು ದುರಂತ. ಕರ್ನಾಟಕದಲ್ಲಿ ಸಾವಿರಾರು ಕೋಟಿ ಮೌಲ್ಯದ ಜಮೀನುಗಳನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರು, ರಾಜಕಾರಣಿಗಳು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು. ಇಂಥ ಕಾಂಗ್ರೆಸ್ ಮುಖಂಡರು ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು.

ಹಲವಾರು ದಶಕಗಳಿಂದ ವಕ್ಫ್ ಕಾಯಿದೆ ಬಗ್ಗೆ ದೇಶ- ರಾಜ್ಯದಲ್ಲಿ ಚರ್ಚೆ ನಡೆಯುತ್ತಿತ್ತು. ನಮ್ಮ ರಾಜ್ಯದಲ್ಲಿ ಸಾವಿರ ವರ್ಷಗಳ ಇತಿಹಾಸ ಇರುವ ದೇವಾಲಯಗಳು, ಧಾರ್ಮಿಕ ಸಂಸ್ಥೆಗಳ ಜಮೀನನ್ನು, ರಾಜ್ಯದ ಲಕ್ಷ ಲಕ್ಷ ರೈತರ ಜಮೀನನ್ನು ಕೂಡ ವಕ್ಫ್ ಬೋರ್ಡ್ ಹೆಸರು ಹೇಳಿಕೊಂಡು ಕಿತ್ತುಕೊಳ್ಳುವ ಕೆಲಸ ನಡೆದಿತ್ತು ಎಂದು ಆಕ್ಷೇಪಿಸಿದರು.

ಇದರ ವಿರುದ್ಧ ಬಿಜೆಪಿ, ಕೆಲ ತಿಂಗಳುಗಳ ಹಿಂದೆ ಪ್ರತಿಭಟನೆ ಮಾಡಿತ್ತು. ಕೇಂದ್ರದಲ್ಲಿ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಸಂಸತ್ತಿನ ಉಪ ಸಮಿತಿ ರಚಿಸಿದ್ದರು. ವಕ್ಫ್ ಮಂಡಳಿ ಹೆಸರಿನಲ್ಲಿ ದೇಶ, ರಾಜ್ಯದ ಜನರಿಗೆ ಆಗುತ್ತಿದ್ದ ದೋಖಾ, ಅನ್ಯಾಯ ಸರಿಪಡಿಸಲು ಈ ಉಪ ಸಮಿತಿ ರಚಿಸಲಾಗಿತ್ತು ಎಂದು ವಿವರಿಸಿದರು.

ವಕ್ಫ್ ತಿದ್ದುಪಡಿ ಮಸೂದೆಗೆ ನಿನ್ನೆ ಮಧ್ಯರಾತ್ರಿ ಲೋಕಸಭೆ ಮಂಜೂರಾತಿ ಕೊಟ್ಟಿದ್ದು, ಇದೊಂದು ಐತಿಹಾಸಿಕ ಕ್ಷಣ ಎಂದು ತಿಳಿಸಿದರು. ಪ್ರತಿಯೊಬ್ಬರೂ ಸಂಭ್ರಮ ಆಚರಿಸುವ ಸುಸಂದರ್ಭ ಇದು ಎಂದರು. ಈ ಮಸೂದೆಗೆ ಮಂಜೂರಾತಿಯನ್ನು ಹಿಂದೂಗಳಷ್ಟೇ ಅಲ್ಲ; ಮುಸಲ್ಮಾನರೂ ಸ್ವಾಗತಿಸಿದ್ದಾರೆ ಎಂದು ತಿಳಿಸಿದರು. ಇದೇವೇಳೆ ಧರಣಿನಿರತರಿಗೆ ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಲಾಯಿತು.

 

(ಕರುಣಾಕರ ಖಾಸಲೆ)

ಮಾಧ್ಯಮ ಸಂಚಾಲಕರು

ಬಿಜೆಪಿ ಕರ್ನಾಟಕ

To Write Comment Please Login